ಬೆಂಗಳೂರು: ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್ ಸೈಬರ್ ವಂಚನೆ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ವಂಚನೆ ನಡೆಸಲು ಬಳಸುತ್ತಿದ್ದ ₹10 ಲಕ್ಷ ಮೌಲ್ಯದ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.
ಆಗಸ್ಟ್ 2ರಂದು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಆಧರಿಸಿ, ವೈಟ್‌ಫೀಲ್ಡ್‌ನ ಡೇಟಾ ಸೆಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರು ಸಿಮ್ ಬಾಕ್ಸ್‌ಗಳು, 133 ಸಿಮ್ ಕಾರ್ಡ್‌ಗಳು, 12 ಡೇಟಾ ಸ್ಟೋರೇಜ್ ಸರ್ವರ್ (ಐಪಿಬಿಎಕ್ಸ್, ಅಪ್ಲಿಕೇಶನ್ ಮತ್ತು ಡೇಟಾಬೇಸ್) ಒಂದು ನೆಟ್ ವರ್ಕ್ ರೌಟರ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಳೆದ ವಾರ ನಡೆದಿದ್ದ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಬಿ.ಇ ಪದವೀಧರ ತುಫೈಲ್ ಅಹಮದ್ (37) ಎಂಬಾತನನ್ನು ಬಂಧಿಸಲಾಗಿತ್ತು. ಆತನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದ್ದ. ಆ ಮಾಹಿತಿ ಆಧರಿಸಿ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಲಾಯಿತು ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
‘ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಲಾಗಿದೆ. ಮತ್ತಿಬ್ಬರು ವಿದೇಶದಲ್ಲಿ ನೆಲಸಿರುವ ಶಂಕೆಯಿದ್ದು ಅವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.
ವೊಡಾಫೋನ್ ಲಿಮಿಟೆಡ್‌ನ ನೋಂದಣಿ ಅಧಿಕಾರಿಯೊಬ್ಬರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗ್ಲೀಮ್ ಗ್ಲೋಬಲ್ ಸರ್ವೀಸಸ್ ಹೆಸರಿನಲ್ಲಿ ಸಿಮ್‌ಗಳನ್ನು ಖರೀದಿಸಿ, ಅವುಗಳನ್ನು ವೈಟ್‌ಫೀಲ್ಡ್ ಐರನ್ ಮೌಂಟನ್ ಡೇಟಾ ಸೆಂಟರ್‌ನಲ್ಲಿ ಅಕ್ರಮವಾಗಿ ಅಳವಡಿಸಿದ ಸಿಮ್ ಬಾಕ್ಸ್ ಬಳಸಲಾಗುತ್ತಿದೆ. ಅಂತರರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಅಲ್ಲದೇ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗೂ ಆರ್ಥಿಕ ನಷ್ಟ ಉಂಟು ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
‘ಆರೋಪಿಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಡೇಟಾ ಸೆಂಟರ್‌ನಲ್ಲಿ ಸಿಮ್ ಬಾಕ್ಸ್ ಅಳವಡಿಸಿಕೊಂಡು ಕರೆಗಳನ್ನು ಪರಿವರ್ತನೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದ. ಮತ್ತಿಬ್ಬರು ವಿದೇಶದಲ್ಲಿದ್ದು, ಅವರ ಸಂಪರ್ಕದಲ್ಲಿ ಕೃತ್ಯ ಎಸಗುತ್ತಿರುವುದಾಗಿ ತಿಳಿಸಿದ್ದ. ವಿದೇಶದಲ್ಲಿರುವ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ವೊಡಾಫೋನ್ ಸಿಮ್‌ಗಳನ್ನು ಖರೀದಿಸಿ ನಕಲಿ ಕಂಪನಿಗಳ ಹೆಸರಿನಲ್ಲಿ ಐಪಿಬಿಎಕ್ಸ್ ಸರ್ವರ್‌ಗಳು ಹಾಗೂ ಸಿಮ್ ಬಾಕ್ಸ್‌ಗಳನ್ನು ಅಳವಡಿಸಿರುವುದಾಗಿ ತಿಳಿಸಿದ್ದ. ಆ ಮಾಹಿತಿ ಆಧರಿಸಿ ವೈಟ್‌ಫೀಲ್ಡ್‌ನಲ್ಲಿದ್ದ ಸೆಂಟರ್ ಮೇಲೆ ದಾಳಿ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.