
ಬೆಂಗಳೂರು: ‘ಈಗಾಗಲೇ ಜಗತ್ತಿನ ಪ್ರಮುಖ ಉದ್ಯಮ ನಗರವಾಗಿ ರೂಪುಗೊಂಡಿರುವ ಬೆಂಗಳೂರು ಮುಂದಿನ ಹತ್ತು ವರ್ಷಗಳಲ್ಲಿ ಡಿಜಿಟಲ್ ಹಾಗೂ ನಾವಿನ್ಯತೆ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬೆಳೆಯಲಿದೆ. ಡಿಜಿಟಿಲ್ ಶಿಕ್ಷಣಕ್ಕೆ ಒತ್ತು ನೀಡುವುದು ಸೂಕ್ತ’ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ( ಕೆ ಡೆಮ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್‌ಕುಮಾರ್ ಗುಪ್ತ ತಿಳಿಸಿದರು.
ವಿದ್ಯಾ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ಎಂಟು ದಶಕದ ಹಿಂದೆಯೇ ಉದ್ಯಮಪರತೆ, ಶಿಕ್ಷಣ ಸ್ನೇಹಿ ವ್ಯವಸ್ಥೆ ರೂಪಿಸಿಕೊಂಡು ಬಂದಿರುವ ರಾಜ್ಯ. ಮೈಸೂರು ಮಹಾರಾಜರು ಇದಕ್ಕೆ ಒತ್ತು ನೀಡಿದ್ದರು. ನಂತರ ಬಂದ ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದರಿಂದ ಕರ್ನಾಟಕ ದೇಶದ ಮುಂಚೂಣಿ ರಾಜ್ಯವಾಗಿ ಬೆಳೆದಿದೆ. ಇದನ್ನು ಮುಂದೆ ತೆಗೆದುಕೊಂಡು ಹೋಗುವ ಜತೆಗೆ ಅಗತ್ಯ ಇರುವವರಿಗೆ ಶಿಕ್ಷಣದ ಜೊತೆಗೆ ಕೌಶಲ ತರಬೇತಿ, ಉದ್ಯೋಗದ ಮಾರ್ಗದರ್ಶನ ನೀಡುವ ಒಳಗೊಳ್ಳುವಿಕೆ ಹೆಚ್ಚಿಸಬೇಕು’ ಎಂದು ತಿಳಿಸಿದರು.
‘ವಿದ್ಯಾ ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿವೇತನ ನೀಡುತ್ತಿದ್ದು, ಯುವಕರು, ಮಹಿಳೆಯರ ಬದುಕಿಗೂ ಆಸರೆಯಾಗಿದೆ. ಈ ಸಂಸ್ಥೆಯೊಂದಿಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಮಂಗಳೂರು ಸಹಿತ ಹಲವು ಕಡೆಗಳಲ್ಲಿ ಡಿಜಿಟಲ್ ಶಿಕ್ಷಣದ ವಿಚಾರದಲ್ಲಿ ವಿದ್ಯಾ ಸಂಸ್ಥೆ ಕೈ ಜೋಡಿಸಲು ಉದ್ಯಮ ವಲಯ, ಸರ್ಕಾರದೊಂದಿಗೆ ಕೆ ಡೆಮ್ ಕೆಲಸ ಮಾಡಲಿದೆ’ ಎಂದು ಹೇಳಿದರು.
ವಿದ್ಯಾ ಸಂಸ್ಥೆ ಸಂಸ್ಥಾಪಕರಾದ ರಶ್ಮಿ ಮಿಶ್ರಾ ಹಾಗೂ ಅಶೋಕ್ ಮಿಶ್ರಾ ಮಾತನಾಡಿ, ‘40 ವರ್ಷದ ಹಿಂದೆ ದೆಹಲಿಯ ಸರ್ಕಾರಿ ಶಾಲೆಯ ಐದು ಮಕ್ಕಳೊಂದಿಗೆ ಆರಂಭಗೊಂಡ ಪಯಣ ಈಗ 9 ರಾಜ್ಯಕ್ಕೆ ವಿಸ್ತರಿಸಿದ್ದು, ಲಕ್ಷಾಂತರ ಮಕ್ಕಳು, ಯುವಕರು, ಮಹಿಳೆಯರ ಬದುಕಿಗೆ ಆಸರೆಯಾಗಿದೆ. ದಕ್ಷಿಣಕ್ಕೂ 15 ವರ್ಷದ ಹಿಂದೆ ಬಂದು 146ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವಾಗಿದೆ. ಕರ್ನಾಟಕದ ಪಯಣವು ಖುಷಿದಾಯಕ ಆಗಿದೆ. ಇನ್ನಷ್ಟು ಸಹಕಾರ ಸಿಕ್ಕರೆ ಮಕ್ಕಳಿಗೆ ಡಿಜಿಟಲ್ ಶಿಕ್ಷಣವನ್ನು ವಿಸ್ತರಿಸಲು ಸಿದ್ದರಿದ್ದೇವೆ’ ಎಂದರು.
ವಿದ್ಯಾ ದಕ್ಷಿಣ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಖಾ ಶ್ರೀನಿವಾಸನ್ ಅವರು ಡಿಜಿಟಲ್ ಶಿಕ್ಷಣ, ಯುವಕರ ಕೌಶಲ ತರಬೇತಿ, ಮಹಿಳೆಯರಲ್ಲಿ ಡಿಜಿಟಲ್ ಜಾಗೃತಿ ಕಾರ್ಯಕ್ರಮಗಳ ವಿವರ ನೀಡಿದರು.
ಯಶೋಗಾಥೆಯ ಅನಾವರಣ
ವಿದ್ಯಾ ಸಂಸ್ಥೆಯ ಕಾರ್ಯಕ್ರಮ ಒಂದೂವರೆ ದಶಕದ ಹಾದಿಯ ಅನಾವರಣದಂತಿತ್ತು. ಮ್ಯಾಜಿಕ್ ಆಫ್ ವಿದ್ಯಾ; ನೋಟದಿಂದ ಪರಿಣಾಮ ಎನ್ನುವ ಹೆಸರನ್ನು ನೀಡಲಾಗಿತ್ತು. ಅಲ್ಲಿ ಬರೀ ಭಾಷಣಕ್ಕಿಂತ ವಿದ್ಯಾ ಸಂಸ್ಥೆ ಬೆಂಬಲದೊಂದಿಗೆ ಬದುಕು ಕಟ್ಟಿಕೊಂಡವರ ಅನುಭವ ಕಥನಗಳು ತೆರೆದುಕೊಂಡವು. ಶಿಕ್ಷಣ ವಂಚಿತರು ತರಬೇತಿ ಪಡೆದು ಉದ್ಯೋಗ ಕಟ್ಟಿಕೊಂಡ ಖುಷಿ ಕ್ಷಣಗಳನ್ನು ಹಂಚಿಕೊಂಡರು. ಮಹಿಳೆಯರೂ ಬದುಕು ಸುಂದರಗೊಳಿಸಿಕೊಂಡ ಕಥನಗಳನ್ನು ತೆರೆದಿಟ್ಟರು. ಕಿರು ಅಭಿನಯ ನೃತ್ಯ ಹಾಡು ಎಲ್ಲವೂ ಯಶೋಗಾಥೆಗಳ ರೂಪಕದಂತೆಯೇ ಇದ್ದವು. ತಮಗೆ ದಾರಿ ತೋರಿದ ವಿದ್ಯಾ ಸಂಸ್ಥೆಯ ರಶ್ಮಿ ಮಿಶ್ರಾ ಹಾಗೂ ಅಶೋಕ ಮಿಶ್ರಾ ಅವರನ್ನು ಹೃದಯ ತುಂಬಿ ಅಭಿನಂದಿಸಿದ್ದು ವಿಭಿನ್ನವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.