ADVERTISEMENT

ಎಬಿಪಿಎಸ್‌ನಲ್ಲಿ 2 ನಿರ್ಣಯ: 3 ವರ್ಷಗಳಲ್ಲಿ ಎಲ್ಲ ಮಂಡಲಗಳಿಗೆ ಆರೆಸ್ಸೆಸ್ ಶಾಖೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 6:57 IST
Last Updated 19 ಮಾರ್ಚ್ 2021, 6:57 IST
ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)
ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)    

ಬೆಂಗಳೂರು:'ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲ ಮಂಡಲಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ' ಎಂದು ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಹೇಳಿದರು.

ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೊರೊನಾದಿಂದಾಗಿ ಕಳೆದ ವರ್ಷ ಮಾರ್ಚ್‌ನಿಂದ ಜೂನ್‌ವರೆಗೆ ಶಾಖೆಗಳು ಸ್ಥಗಿತಗೊಂಡಿದ್ದವು. ಜುಲೈನಂತರಮತ್ತೆ ಆರಂಭಗೊಂಡಿವೆ. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಈವರೆಗೆ ಶೇ 89ರಷ್ಟು ಶಾಖೆಗಳು ಮತ್ತೆ ಆರಂಭವಾಗಿವೆ' ಎಂದರು.

'ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಸಕ್ರಿಯರಾಗಿದ್ದರು. ಇಡೀ ಸಮಾಜವೇ ಕೊರೊನಾ ಪರಿಸ್ಥಿತಿಗೆ ಸ್ಪಂದಿಸಿ ಸರ್ಕಾರದ ಜತೆ ಕೈ ಜೋಡಿಸಿವೆ. ಸಂಘದ ಪರಿವಾರ ಸಂಘಟನೆಯಾದ ಸೇವಾ ಭಾರತಿ ದೇಶದ 92,656 ಸ್ಥಳಗಳಲ್ಲಿ ಕೆಲಸ ಮಾಡಿದೆ. 5.07 ಲಕ್ಷ ಕಾರ್ಯಕರ್ತರು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. 76 ಲಕ್ಷ ರೇಷನ್ ಕಿಟ್, 4.50 ಕೋಟಿ ಆಹಾರ ಕಿಟ್, 9 ಲಕ್ಷ ಮಾಸ್ಕ್, 20 ಲಕ್ಷ ವಲಸೆ ಕಾರ್ಮಿಕರಿಗೆ ನೆರವು ನೀಡಲಾಗಿದೆ. ಜೊತೆಗೆ ಕಾರ್ಯಕರ್ತರು60 ಸಾವಿರ ಯುನಿಟ್ ರಕ್ತ ದಾನ ಮಾಡಿದ್ದಾರೆ' ಎಂದರು.

ADVERTISEMENT

'ವಿದ್ಯಾರ್ಥಿಗಳು, 40 ವರ್ಷದ ಒಳಗಿನವರು ಮತ್ತು 40 ವರ್ಷ ದಾಟಿದ ಉದ್ಯೋಗಿಗಳು ಹೀಗೆ ಶಾಖೆಗಳಲ್ಲಿ ಮೂರು ವಿಧವಿದೆ. ಅದರಲ್ಲಿ 40 ವರ್ಷ ದಾಟಿದ ಉದ್ಯೋಗಿಗಳ ಶಾಖೆ ಶೇ 11, 40 ವರ್ಷ ಕೆಳಗಿನವರು ಹಾಗೂ ವಿದ್ಯಾರ್ಥಿಗಳದ್ದು ಶೇ 89ರಷ್ಟು. ಅದರಲ್ಲಿಯೂ ಶೇ 60ರಷ್ಡು ವಿದ್ಯಾರ್ಥಿಗಳಿದ್ದಾರೆ. ಆರೆಸ್ಸೆಸ್ ಗೆ ಯುವ ಪೀಳಿಗೆ ಸ್ಪಂದನೆ ಹಾಗೂ ಆಕರ್ಷಣೆ ಉತ್ತಮವಾಗಿದೆ. ದೇಶದ 6,495 ತಾಲ್ಲೂಕುಗಳಲ್ಲಿ ಶೇ 80ರಷ್ಟು ಕಡೆಗಳಲ್ಲಿ ಸಂಘದಶಾಖೆ ನಡೆಯುತ್ತಿದೆ. 58, 500 ಮಂಡಲಗಳಲ್ಲಿ ಶೇ 40ರಷ್ಟು ಕಡೆಗಳಲ್ಲಿ ಪ್ರತಿನಿತ್ಯ ಶಾಖೆ, ಶೇ 20ರಷ್ಟು ಕಡೆಗಳಲ್ಲಿ ಸಂಘದ ಸಂಪರ್ಕ ಇದೆ' ಎಂದರು.

ನಿಧಿ ಸಮರ್ಪಣಾ ಅಭಿಯಾನಕ್ಕೆ ಸ್ಪಂದನೆ: 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ನಿಧಿ ಸಮರ್ಪಣಾ ಅಭಿಯಾನಕ್ಕೆ ದೇಶದಾದ್ಯಂತ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಇಡೀ ದೇಶ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಅಭಿಯಾನ ನಡೆಸಲಾಗಿದೆ. ಭಾರತವನ್ನು ಭಾವನಾತ್ಮಕವಾಗಿ ಏಕರೂಪದಲ್ಲಿ ಜೋಡಿಸುವ ಶಕ್ತಿ ಶ್ರೀರಾಮನಿಗಿದೆ. ಈ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಭಾಗವಹಿಸಿದ್ದರು, 12, 47,20,000 ಕುಟುಂಬಗಳನ್ನು ತಲುಪಿದ್ದೇವೆ. ಮಿಜೋರಾಂ, ಮೇಘಾಲಯ, ಅಂಡಮಾನ್ ನಿಕೋಬಾರ್ ದ್ವೀಪ, ಲಡಾಕ್ ಹೀಗೆ ಎಲ್ಲ ಭಾಗಕ್ಕೂ ತಲುಪಿದ್ದೇವೆ' ಎಂದರು.

ಎರಡು ನಿರ್ಣಯ: 'ಪ್ರತಿನಿಧಿ ಸಭೆಯಲ್ಲಿ ಎರಡು ನಿರ್ಣಯಗಳ ಬಗ್ಗೆ ಚರ್ಚೆ ನಡೆದು, ಅಂಗೀಕರಿಸಲಾಗುವುದು‌. ಒಂದು, ಕೊರೊನಾ ಸಮಯದಲ್ಲಿ ಸಮಾಜ ಸ್ಪಂದನೆ ನೀಡಿದ ರೀತಿ ಹಾಗೂ ಲಸಿಕೆ ಸಂಶೋಧನೆ ಮಾಡಿ 71 ದೇಶಕ್ಕೆ ನೀಡಿರುವುದು ಹಾಗೂ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸ್ ವ್ಯವಸ್ಥೆ ಸೇರಿದಂತೆ ಎಲ್ಲರ ಕಾರ್ಯವನ್ನು ಶ್ಲಾಘಿಸುವ ಉದ್ದೇಶದಿಂದ ದೇಶದ ಜನರಿಗೆ ಅಭಿನಂದನೆ ಸಲ್ಲಿಸುವುದು. ಇನ್ನೊಂದು ಸಮಾಜವನ್ನು ಸಾಂಸ್ಕೃತಿಕವಾಗಿ ಒಂದು ಮಾಡಿದ ನಿಧಿ ಸಮರ್ಪಣಾ ಅಭಿಯಾನಕ್ಜೆ ಸಮಾಜದ ಸ್ಪಂದನೆಗೆ ಅಭಿನಂದನೆ ಸಲ್ಲಿಸುವುದು ಆಗಿದೆ ಎಂದರು.

ದೇಣಿಗೆ ಕೊಟ್ಟವರೂ ನಮ್ಮವರೆ. ಕೊಡದವರೂ ನಮ್ಮವರೆ: 'ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಿಧಿ ಸಮರ್ಪಣಾ ಅಭಿಯಾನದ ಸಂದರ್ಭದಲ್ಲಿ ರಾಮ‌ಮಂದಿಕ್ಕೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಅಂಥ ಮನೆಗಗಳನ್ನುಮಾರ್ಕ್ ಮಾಡುವ ಸಂಸ್ಕೃತಿ ನಮ್ಮದಲ್ಲ. ದೇಣಿಗೆ ಕೊಟ್ಟವರೂ ನಮ್ಮವರೆ. ಕೊಡದವರೂ ನಮ್ಮವರೆ' ಎಂದು ಮನಮೋಹನ ವೈದ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.