ADVERTISEMENT

ಕೆಂಪೇಗೌಡ ಬಡಾವಣೆ ಡಾಂಬರೀಕರಣಕ್ಕೆ 2 ವರ್ಷ: ಬಿಡಿಎ ನಿರ್ಧಾರಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 15:47 IST
Last Updated 27 ಫೆಬ್ರುವರಿ 2025, 15:47 IST
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ   

(ಸಾಂಕೇತಿಕ ಚಿತ್ರ)

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಕೆಪಿಎಲ್) ಆರು ಬ್ಲಾಕ್‌ಗಳ ರಸ್ತೆಗಳ ಡಾಂಬರೀಕರಣಕ್ಕೆ ಎರಡು ವರ್ಷ ಕಾಲಾವಧಿ ನಿಗದಿಪಡಿಸಿ ಟೆಂಡರ್ ಕರೆದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ಧ ಎನ್‌ಕೆಪಿಎಲ್ ಮುಕ್ತ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

‘ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಪ್ರಾಧಿಕಾರವು ವಿಳಂಬ ನೀತಿ ಅನುಸರಿಸುತ್ತಿದೆ. ಹತ್ತು ವರ್ಷಗಳಿಂದ ಮೂಲಸೌಕರ್ಯ ಕೊರತೆಯಿಂದ ನಿವೇಶನಗಳ ಮಾಲೀಕರು ಮನೆಗಳನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ. ಬಿಡಿಎ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ. ಡಾ.ಶಿವರಾಮ ಕಾರಂತ ಬಡಾವಣೆ ಮಾದರಿಯಲ್ಲೇ ಎನ್‌ಕೆಪಿಎಲ್ ಬಡಾವಣೆಯ ರಸ್ತೆಗಳ ಡಾಂಬರೀಕರಣಕ್ಕೆ ಬಹು ಏಜೆನ್ಸಿ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ವೇದಿಕೆ ಅಧ್ಯಕ್ಷ ಚನ್ನಬಸವರಾಜ ಆಗ್ರಹಿಸಿದ್ದಾರೆ.

ADVERTISEMENT

ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಲ್ಲಿ ಒಂಬತ್ತು ಏಜೆನ್ಸಿಗಳನ್ನು (ಪ್ರತಿ ಬ್ಲಾಕ್‌ಗೆ ಒಂದು) ಬಿಡಿಎ ಬಳಸಿತ್ತು. ಇದರಿಂದ ಕಾಮಗಾರಿ ಬೇಗ ಪೂರ್ಣಗೊಂಡಿತ್ತು. ಆದರೆ, ಕೆಂಪೇಗೌಡ ಬಡಾವಣೆಗೆ ಈ ಮಾದರಿಯನ್ನು ಬಳಸದಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.

ಆರು ಬ್ಲಾಕ್‌ಗಳ ರಸ್ತೆಗಳ ಡಾಂಬರೀಕರಣವನ್ನು ಒಂದೇ ಟೆಂಡರ್‌ನಡಿ ಮಾಡಲು ಮುಂದಾಗಿದೆ.  ವಿಧಾನಸಭೆ ಅರ್ಜಿ ಸಮಿತಿ ಸಭೆಯಲ್ಲಿ, ‘ಕೆಂಪೇಗೌಡ ಬಡಾವಣೆಯಲ್ಲಿ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಶೇಕಡ 80ರಷ್ಟು ಪೂರ್ಣಗೊಂಡಿದೆ’ ಎಂದು ಬಿಡಿಎ ಅಧಿಕಾರಿಗಳು ನೀಡಿರುವ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಡಾಂಬರೀಕರಣಕ್ಕೆ ಎರಡು ವರ್ಷ ಸಮಯ ನಿಗದಿಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.