ADVERTISEMENT

249 ಮಕ್ಕಳು ಶಿಕ್ಷಣ ವಂಚಿತರು!

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸಮೀಕ್ಷೆ ಬಹಿರಂಗ

ಆರ್‌.ಜೆ.ಯೋಗಿತಾ
Published 6 ಜುಲೈ 2017, 20:11 IST
Last Updated 6 ಜುಲೈ 2017, 20:11 IST
249 ಮಕ್ಕಳು ಶಿಕ್ಷಣ ವಂಚಿತರು!
249 ಮಕ್ಕಳು ಶಿಕ್ಷಣ ವಂಚಿತರು!   

ಬೆಂಗಳೂರು: ನಗರದ ಎಚ್‌ಬಿಆರ್‌ ಬಡಾವಣೆಯಲ್ಲಿನ ಮೂರು ಕೊಳೆಗೇರಿಗಳಲ್ಲಿ 249 ಮಕ್ಕಳು ಶಾಲೆಯ ಮೆಟ್ಟಿಲ್ಲನ್ನೇ ಹತ್ತಿಲ್ಲ ಎಂಬ ವಿಷಯ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ಎಚ್‌ಬಿಆರ್‌ ಬಡಾವಣೆಯಲ್ಲಿನ ಇಸ್ಕಾನ್‌ ದೇವಸ್ಥಾನ, ಸಂಡೇ ಮಾರುಕಟ್ಟೆ ಹಾಗೂ ಕಾಡುಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೊಳೆಗೇರಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 117 ಬಾಲಕಿಯರು ಹಾಗೂ 132 ಬಾಲಕರು ಶಿಕ್ಷಣ ವಂಚಿತರಾಗಿದ್ದಾರೆ. ಈ ಕೊಳೆಗೇರಿಗಳಲ್ಲಿ ಸುಮಾರು 170 ಕುಟುಂಬಗಳು 10 ವರ್ಷಗಳಿಂದ ವಾಸ್ತವ್ಯ ಹೂಡಿವೆ.

ಇದರಲ್ಲಿ 20 ಮಂದಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಆಯೋಗ ನಡೆಸಿದ ಸ್ಥಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

‘ಉತ್ತರ ಕರ್ನಾಟಕದ ಬಳ್ಳಾರಿ, ಕಲಬುರ್ಗಿ ಹಾಗೂ ರಾಯಚೂರು ಭಾಗಗಳಿಂದ ಈ ಕುಟುಂಬಗಳು ನಗರಕ್ಕೆ  ವಲಸೆ ಬಂದಿವೆ. ಈ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂಬ ವಿಷಯವೇ ತಿಳಿದಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.



‘ಇಲ್ಲಿನ ಮಕ್ಕಳು ಬಾಲ ಕಾರ್ಮಿಕರಾಗಿ, ಪೋಷಕರ ಕೆಲಸದಲ್ಲಿ ಸಹಾಯಕರಾಗಿ ಸಮಯ ಕಳೆಯುತ್ತಿದ್ದಾರೆ. ಶೈಕ್ಷಣಿಕ ಸೌಲಭ್ಯ ಸೇರಿ ಸರ್ಕಾರದ ಯಾವುದೇ ಸವಲತ್ತುಗಳು ಈ ಮಕ್ಕಳಿಗೆ ದೊರೆತಿಲ್ಲ. ನಗರದಲ್ಲಿರುವ ಈ ಪ್ರದೇಶಗಳತ್ತ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಸುಳಿದಿಲ್ಲ’ ಎಂದು ಆಯೋಗದ ಸದಸ್ಯ ಮರಿಸ್ವಾಮಿ ತಿಳಿಸಿದರು. 

‘ಇತ್ತೀಚೆಗೆ ದಾಖಲಾದ ಪೋಕ್ಸೊ ಪ್ರಕರಣದ  ಮಗುವನ್ನು ವಿಚಾರಿಸಲು ಕಾಚರಕನಹಳ್ಳಿಯ ಕೊಳೆಗೇರಿಗೆ ಭೇಟಿ ನೀಡಿದಾಗ ಅಲ್ಲಿ ಸುಮಾರು 250 ಮಕ್ಕಳು ಶಾಲೆಗೆ ಹೋಗದಿರುವುದು ತಿಳಿದು ಬಂದಿತು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಮಾಹಿತಿ ನೀಡಿದರು.

‘ಎಚ್‌ಬಿಆರ್‌ ಬಡಾವಣೆಯಲ್ಲಿರುವ ಕೊಳೆಗೇರಿಯ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ. ಆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದರು.

ಅಪೌಷ್ಠಿಕತೆ ತೊಂದರೆ: ಕೇವಲ ಮಕ್ಕಳು ಶಾಲೆಗೆ ಹೋಗದಿರುವುದಷ್ಟೇ ಅಲ್ಲದೆ, ಇಲ್ಲಿರುವ ಗರ್ಭಿಣಿಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ಸುತ್ತಮುತ್ತ ಯಾವುದೇ ಅಂಗನವಾಡಿಗಳು ಇಲ್ಲದಿರುವುದಿಂದ, ಇಲ್ಲಿನ ಮಹಿಳೆಯರಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ಇಲ್ಲ. ಈ ಬಗ್ಗೆ ಗಮನಹರಿಸದಿರುವ ಇಲಾಖೆಗಳ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT