ADVERTISEMENT

2ಎ ಮೀಸಲಾತಿಗೆ ಆಗ್ರಹ‌: ಪಂಚಮಸಾಲಿ ಪಂಚಾಯತ್ ಪ್ರತಿಜ್ಞಾ ಅಭಿಯಾನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 7:58 IST
Last Updated 25 ಆಗಸ್ಟ್ 2021, 7:58 IST

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನೀಡಿದ್ದ ಗಡುವು ನೆನಪಿಸುವ ನಿಟ್ಟಿನಲ್ಲಿ ಇದೇ 26ರಿಂದ ಪಂಚಮಸಾಲಿ ಪಂಚಾಯತ್ ಪ್ರತಿಜ್ಞಾ ಅಭಿಯಾನವು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯಲಿದೆ.

ನಗರದ ಚಾಲುಕ್ಯ ವೃತ್ತದಲ್ಲಿನ ಬಸವೇಶ್ವರರ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, 'ಮೀಸಲಾತಿ ನೀಡಲು ಸರ್ಕಾರ ತೆಗೆದುಕೊಂಡಿದ್ದ ಸಮಯ ಸೆ. 16ಕ್ಕೆ ಮುಗಿಯಲಿದೆ.‌ ಈ ಸರ್ಕಾರವು ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸದೊಂದಿಗೆ ಅಭಿಯಾನ ಆರಂಭವಾಗಲಿದೆ' ಎಂದರು.

'ಈ ಅಭಿಯಾನವು ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಚಾಮರಾಜನಗರದ ಮಲೆಮಹಾದೇಶ್ವರ ಬೆಟ್ಟದ ಶಕ್ತಿಪೀಠದಿಂದ ಆರಂಭವಾಗಿ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮೂಲಕ ಬೆಂಗಳೂರಿನ ವಿಧಾನಸೌಧದವರೆಗೂ ನಡೆಯಲಿದೆ' ಎಂದರು.

ADVERTISEMENT

ಸಮುದಾಯದ ಮುಖಂಡ ವಿಜಯಾನಂದ‌ ಕಾಶಪ್ಪನವರ, 'ಸೆ.16 ರೊಳಗೆ ಮೀಸಲಾತಿ ನೀಡದಿದ್ದರೆ, ಅ.1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು' ಎಂದರು.

ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ, 'ಮೀಸಲಾತಿ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ಸ್ವಾಮೀಜಿಯವರ ಜೊತೆಗೆ ನಿಲ್ಲುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.