ADVERTISEMENT

ಭೂಗಳ್ಳರಿಗೆ ಶಾಕ್ ಕೊಟ್ಟ ಬೆಂಗಳೂರು ಜಿಲ್ಲಾಡಳಿತ; ₹160 ಕೋಟಿ ಮೌಲ್ಯದ ಜಾಗ ವಶಕ್ಕೆ

ಎಚ್‌ಎಸ್‌ಆರ್‌ ಬಡಾವಣೆಯ 4 ಎಕರೆ ಜಾಗ ಸರ್ಕಾರಿ ಭೂಮಿ: ವಿಶೇಷ ಜಿಲ್ಲಾಧಿಕಾರಿ ಆದೇಶ

ಮಂಜುನಾಥ್ ಹೆಬ್ಬಾರ್‌
Published 24 ಅಕ್ಟೋಬರ್ 2021, 20:35 IST
Last Updated 24 ಅಕ್ಟೋಬರ್ 2021, 20:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹160 ಕೋಟಿ ಮೌಲ್ಯದ ನಾಲ್ಕು ಎಕರೆ ಖರಾಬು ಭೂಮಿಯನ್ನು ಕಬಳಿಸುವ ಯತ್ನವನ್ನು ನಗರ ಜಿಲ್ಲಾಡಳಿತ ವಿಫಲಗೊಳಿಸಿದೆ. ಎಳ್ಳುಕುಂಟೆ ಗ್ರಾಮದ ಸರ್ವೆ ಸಂಖ್ಯೆ 18/8ರ ನಾಲ್ಕು ಎಕರೆ ಜಾಗ ಸರ್ಕಾರಿ ಭೂಮಿ ಎಂದು ವಿಶೇಷ ಜಿಲ್ಲಾಧಿಕಾರಿ ಬಸವರಾಜು ಆದೇಶ ಹೊರಡಿಸಿದ್ದಾರೆ.

ಅರ್ಜಿದಾರರಾದ ಕೆ.ಮನೋಹರ್ ರಾಜು, ಎಸ್‌.ಅಮೃತ ಕುಮಾರಿ, ಕೆ.ಆರ್‌.ವೇಣುಗೋಪಾಲ್‌ ಅವರ ಮನವಿಯನ್ನು ತಿರಸ್ಕರಿಸಿರುವ ವಿಶೇಷ ಜಿಲ್ಲಾಧಿಕಾರಿ ಅವರು, 2016ರಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳಲ್ಲಿರುವ ಸಹಿಗೆ ಹಾಗೂ ಭೂನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಹಾಕಿರುವ ಸಹಿಗೂ ತಾಳೆಯಾಗುತ್ತಿಲ್ಲ ಎಂಬ ಅಂಶವನ್ನು ಅವರು ಆದೇಶದಲ್ಲಿ ಬೊಟ್ಟುಮಾಡಿದ್ದಾರೆ. ಇಲ್ಲಿ ಒಂದು ಎಕರೆ ಜಾಗಕ್ಕೆ ಮಾರುಕಟ್ಟೆ ಮೌಲ್ಯ ₹40 ಕೋಟಿ ಇದೆ.

ADVERTISEMENT

ಏನಿದು ಪ್ರಕರಣ: ‘ಅಣ್ಣಾಮಲೈ ಮೊದಲಿಯಾರ್‌ ಹಾಗೂ ಮುನಿಗ ಎಂಬವರು ಈ ಜಾಗದ ಮೂಲ ಮಾಲೀಕರಾಗಿದ್ದು, 1929ರಿಂದಲೂ ಸರ್ವೆ ದಾಖಲೆಗಳು ಅವರ ಹೆಸರಿನಲ್ಲಿ ಇವೆ. ಅವರ ನಿಧನದ ನಂತರ ಮುನಿಗ ಅವರ ಪುತ್ರ ದೊಡ್ಡಣ್ಣ ಎಂಬುವರು 1954ರಲ್ಲಿ ಎ.ನಾರಾಯಣಪ್ಪ ಎಂಬುವರಿಗೆ ಜಾಗ ಮಾರಿದರು.

ನಾರಾಯಣಪ್ಪ ಹಾಗೂ ಕುಟುಂಬದವರು ನಾಲ್ಕು ಎಕರೆಯನ್ನು ಕೃಷ್ಣಾರೆಡ್ಡಿ ಅವರಿಗೆ ಮಾರಾಟ ಮಾಡಿದರು. ಇದೇ ವೇಳೆ, ಕೃಷ್ಣಾ ರೆಡ್ಡಿ ಅವರಿಂದ ಮುನಿರಾಜು ರೆಡ್ಡಿ ಎಂಬುವರು 1980ರಲ್ಲೇ ಈ ಜಾಗವನ್ನು ಖರೀದಿಸಿದರು. ಮುನಿರಾಜು ರೆಡ್ಡಿ ಅವರು ಎರಡು ಎಕರೆಯನ್ನು ಕೆ.ಮನೋಹರ ರಾಜು ಹಾಗೂ ಎರಡು ಎಕರೆಯನ್ನು ಎಸ್‌.ಅಮೃತ ಕುಮಾರಿ ಅವರಿಗೆ 1988ರ ನವೆಂಬರ್‌ನಲ್ಲಿ ಮಾರಿದರು. ಅಂದಿನಿಂದ ಈ ಜಾಗವು ತಮ್ಮ ಹೆಸರಿನಲ್ಲಿ ಇದೆ’ ಎಂಬುದು ಅರ್ಜಿದಾರರ ವಾದ.

ಈ ನಡುವೆ, ಎಳ್ಳುಕುಂಟೆ ಎಕ್ಸ್‌ಟೆಕ್ಷನ್‌ ಮತ್ತು ಹೊಸಪಾಳ್ಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಪ್ರಭಾರಾಧ್ಯ ಎಂಬುವರು ಈ ಪ್ರಕರಣದ ಪ್ರತಿವಾದಿಯಾಗಿ ಸೇರ್ಪಡೆಯಾದರು. ಈ ಸರ್ವೆ ಸಂಖ್ಯೆ ಮೂಲಕವೇ ಐಟಿಐ ಲೇಔಟ್‌ ಹಾಗೂ ಇತರ ಬಡಾವಣೆಗಳಿಗೆ ಹೋಗುವ ರಸ್ತೆ ಇದ್ದು, ಇದನ್ನು ಬಳಸಲು ಅರ್ಜಿದಾರರು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

‘ಮುನಿಗ ಅವರು ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದರು. ಆದರೆ, ಅವರು ಈ ಜಾಗದ ಮಾಲೀಕರಲ್ಲ’ ಎಂದೂ ದಾಖಲೆಗಳನ್ನು ಹಾಜರುಪಡಿಸಿದರು. ಇದು ಖರಾಬು ಭೂಮಿಯಾಗಿದ್ದು, ರಸ್ತೆ ಹಾಗೂ ಉದ್ಯಾನ ನಿರ್ಮಾಣಕ್ಕಾಗಿ ಒಂದು ಎಕರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ಅವರು 2008ರಲ್ಲಿ ಆದೇಶ ಹೊರಡಿಸಿದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಮೊರೆ ಹೋದರು. ಕಾನೂನಿನ ಪ್ರಕಾರ ವಿಚಾರಣೆ ನಡೆಸಿ ಇತ್ಯರ್ಥ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ನ್ಯಾಯಮಂಡಳಿ 2014ರಲ್ಲಿ ಸೂಚಿಸಿತು.

ಈ ನಡುವೆ, ಈ ಸರ್ವೆ ಸಂಖ್ಯೆಯಒಂದು ಎಕರೆ ಜಾಗ ತನಗೆ ಮಂಜೂರಾಗಿದೆ ಎಂದು ಕೆ.ಆರ್‌.ವೇಣುಗೋಪಾಲ್‌ ಅವರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿದಾರರಿಗೆ ಸೂಕ್ತ ನೋಟಿಸ್‌ಗಳನ್ನು ನೀಡದೆ ಉಪವಿಭಾಗಾಧಿಕಾರಿ ಅವರು 2016ರಲ್ಲಿ ಆದೇಶ ಹೊರಡಿಸಿದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋದರು.

ಜಿಲ್ಲಾಧಿಕಾರಿ ಅವರು ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿದರು. ಇದೇ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತು. ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಹಾಗೂ ಸರ್ಕಾರಿ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ವಿಶೇಷ ಜಿಲ್ಲಾಧಿಕಾರಿ ಅವರು, ಅರ್ಜಿದಾರರ ಹೆಸರಿನಲ್ಲಿರುವ ಮ್ಯುಟೇಷನ್‌ ಎಂಟ್ರಿಗಳನ್ನು ರದ್ದುಪಡಿಸಬೇಕು ಹಾಗೂ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ನಿರ್ದೇಶನ ನೀಡಿದ್ದಾರೆ.

‘ಅಣ್ಣಾಮಲೈ ಮೊದಲಿಯಾರ್‌ ಹಾಗೂ ಮುನಿಗ ಅವರಿಂದ ನಾರಾಯಣಪ್ಪ ಅವರು ಜಾಗ ಖರೀದಿ ಮಾಡಿದ್ದರು. ಇನಾಂ ರದ್ದತಿ ಕಾಯ್ದೆ ಜಾರಿಗೆ ಬಂದ ಬಳಿಕ ನಾರಾಯಣಪ್ಪ ಅವರು 1974ರಲ್ಲಿ ಈ ಜಾಗವನ್ನು ಮರು ಮಂಜೂರಾತಿ ಮಾಡಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಸಲ್ಲಿಸಿದರು. ಅವರು ಭೂ ನ್ಯಾಯಮಂಡಳಿಗೆ ಈ ಪ್ರಕರಣವನ್ನು ವರ್ಗಾಯಿಸಿದರು. ನಾರಾಯಣಪ್ಪ ಪರವಾಗಿ ನ್ಯಾಯಮಂಡಳಿ 1982ರಲ್ಲಿ ಆದೇಶ ಹೊರಡಿಸಿತು.

ಇದನ್ನು ತಾವು ಖರೀದಿ ಮಾಡಿದ್ದೇವೆ ಎಂಬುದು ಅರ್ಜಿದಾರರ ವಾದ. ನ್ಯಾಯಮಂಡಳಿ ನೀಡಿರುವ ಆದೇಶದ ದಾಖಲೆಗಳನ್ನು ತಹಶೀಲ್ದಾರ್‌ ಹಾಜರುಪಡಿಸಿದರು. ಅಲ್ಲಿ ನ್ಯಾಯಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಹಾಕಿರುವ ಸಹಿಗೂ ಮತ್ತು ಅರ್ಜಿದಾರರು ಕೊಟ್ಟಿರುವ ದಾಖಲೆಯಲ್ಲಿರುವ ಸಹಿಗೂ ತಾಳೆಯಾಗುತ್ತಿಲ್ಲ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ನೈಜವಾಗಿಲ್ಲ’ ಎಂದು ವಿಶೇಷ ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.