ADVERTISEMENT

45 ಕೆರೆಗಳ ಪುನರುಜ್ಜೀವನ– ಟೆಕಿ ಪಣ

ಭೌಗೋಳಿಕ ಸ್ಥಿತಿಗತಿ ಆಧರಿಸಿ ಜಲಮೂಲಗಳಿಗೆ ಮರುಜೀವ l ಆನೇಕಲ್‌ ತಾಲ್ಲೂಕಿನ 4 ಕೆರೆಗಳ ಚಿತ್ರಣ ಬದಲು

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:58 IST
Last Updated 29 ಮೇ 2019, 19:58 IST
ಆನಂದ ಮಲ್ಲಿಗವಾಡ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿರುವ ಕ್ಯಾಲಸನಹಳ್ಳಿ ಕೆರೆ
ಆನಂದ ಮಲ್ಲಿಗವಾಡ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿರುವ ಕ್ಯಾಲಸನಹಳ್ಳಿ ಕೆರೆ   

ಬೆಂಗಳೂರು: ಬತ್ತಿರುವ ಹಾಗೂ ಕಲುಷಿತಗೊಂಡಿರುವ ಕೆರೆಗಳಿಗೆ ಮರುಜೀವ ನೀಡಲು ಶ್ರಮಿಸುತ್ತಿರುವ ಟೆಕಿ ಆನಂದ ಮಲ್ಲಿಗವಾಡ ಅವರು, ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿರುವ 45 ಜಲಮೂಲಗಳನ್ನು 2025ರ ವೇಳೆಗೆ ನೈಸರ್ಗಿಕವಾಗಿ ಪುನರುಜ್ಜೀವನಗೊಳಿಸುವ ಪಣತೊಟ್ಟಿದ್ದಾರೆ.

ಪರಸ್ಪರ ಸಂಪರ್ಕ ಹೊಂದಿರುವ ಕೆರೆಗಳಿಗೆ ಮರುಜೀವ ನೀಡುವುದು ಆನಂದ್‌ ಅವರ ವಿಶೇಷ. ಕೆರೆ ಸುಧಾರಣೆಗೆ ಮುಂದಾಗುವ ಮೊದಲು ಅವುಗಳ ಭೌಗೋಳಿಕ ಸ್ಥಿತಿಗತಿಗಳ ಅಧ್ಯಯನ ನಡೆಸುತ್ತಾರೆ. ಇದೇ ರೀತಿ ಆನೇಕಲ್‌ ತಾಲ್ಲೂಕಿನ ನಾಲ್ಕು ಕೆರೆಗಳ ಚಿತ್ರಣವನ್ನೇ ಬದಲಿಸಿದ್ದಾರೆ.

‘ಮೊದಲಿಗೆ ಗವಿಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಕೆರೆ ಭರ್ತಿಯಾದರೆ ಅದರ ನೀರು ಕೋಡಿ ಹರಿದು ವಾಬಸಂದ್ರ ಕೆರೆಯನ್ನು,ನಂತರ ಬಂಡೆನೆಲಸಂದ್ರ ಕೆರೆಯನ್ನು ಸೇರುತ್ತದೆ. ಕೊನೆಗೆ ಹೆನ್ನಾಗರ ದೊಡ್ಡಕೆರೆಯ ಒಡಲನ್ನು ತಲುಪುತ್ತದೆ. ಈ ನಾಲ್ಕು ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದರಿಂದ ಹೆನ್ನಾಗರ ಕೆರೆ ಈಗ ಭರ್ತಿಯಾಗಿದೆ’ ಎಂದು ಆನಂದ ಮಲ್ಲಿಗವಾಡ ವಿವರಿಸಿದರು.

ADVERTISEMENT

‘ಗವಿಕರೆಯನ್ನು ಜೀರ್ಣೋದ್ಧಾರ ಮಾಡುವಾಗ ಯಂತ್ರೋಪಕರಣಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿದ್ದೇವೆ. ಶೇ 80ರಷ್ಟು ಕೆಲಸವನ್ನು ಜನರಿಂದಲೇ ಮಾಡಿಸಿದ್ದೇವೆ. ಇದಕ್ಕೆ ₹15 ಲಕ್ಷ ಮಾತ್ರ ವೆಚ್ಚವಾಗಿದೆ’ ಎಂದರು.

‘ವಾಬಸಂದ್ರ ಕೆರೆಯನ್ನು ₹ 95 ಲಕ್ಷ ವೆಚ್ಚದಲ್ಲಿ ಜಲಾಶಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. 36 ಎಕರೆಗಳಷ್ಟು ವಿಶಾಲವಾಗಿರುವಕ್ಯಾಲಸನಹಳ್ಳಿ ಕೆರೆಯನ್ನು ₹1.17 ಕೋಟಿ ವೆಚ್ಚದಲ್ಲಿ ರೈತಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ₹81 ಲಕ್ಷ ವೆಚ್ಚದಲ್ಲಿ ಬಂಡೆನೆಲಸಂದ್ರ ಕೆರೆಯನ್ನು ತಟ್ಟೆಯಾಕಾರದಲ್ಲಿ ಪುನರುಜ್ಜೀವನಗೊಳಿಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಕೆರೆಯೂ ಒಂದೊಂದು ವೈಶಿಷ್ಟ್ಯವನ್ನು ಹೊಂದಿದೆ. ನಮ್ಮ ಕಾರ್ಯ ಇವುಗಳ ಪುನರುಜ್ಜಿವನಕ್ಕೆ ಮಾತ್ರ ಸೀಮಿತವಾಗಿಲ್ಲ. ಕೆರೆಗಳ ಬಳಿ ಜಪಾನ್ ಮಾದರಿಯ ಮೂರು ‘ಮಿಯಾವಾಕಿ’ ಉದ್ಯಾನಗಳನ್ನು ನಿರ್ಮಿಸಿದ್ದೇವೆ. 38 ಸಾವಿರ ಗಿಡಗಳನ್ನು ಬೆಳೆಸಿದ್ದೇವೆ. ಅದರಲ್ಲಿ 6 ಸಾವಿರ ಹಣ್ಣಿನ ಗಿಡಗಳು, 23 ಸಾವಿರ ಔಷಧಿ ಗಿಡಗಳೂ ಸೇರಿವೆ’ ಎಂದು ವಿವರಿಸಿದರು.

‘45 ಕೆರೆಗಳನ್ನು 45 ವಿಭಿನ್ನ ವಿನ್ಯಾಸಗಳಲ್ಲಿ ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸಿದ್ದೇನೆ. ಕನಿಷ್ಠ 45 ಸಾವಿರ ಗಿಡಗಳನ್ನು ಬೆಳೆಸಬೇಕೆಂಬ ಉದ್ದೇಶ ಇದೆ’ ಎಂದು ಅವರು ತಿಳಿಸಿದರು.

‘ಬೆಂಗಳೂರು ಮಾತ್ರವಲ್ಲದೇ ಕೊಪ್ಪಳ ಜಿಲ್ಲೆಯಲ್ಲೂ ಕೆರೆಗಳನ್ನು ಗುರುತಿಸಿದ್ದೇನೆ. ಜಲಮೂಲಗಳು ನಮ್ಮ ಜೀವನಾಡಿಯಾಗಿದ್ದು, ಅವುಗಳನ್ನು ನೈಸರ್ಗಿಕವಾಗಿ ಅಭಿವೃದ್ಧಿಪಡಿಸುವುದು ನನ್ನ ಉದ್ದೇಶ. ಇದಕ್ಕಾಗಿ ‘ಸನ್‌ಸೇರಾ’ ಸೇರಿದಂತೆ ವಿವಿಧ ಐ.ಟಿ ಕಂಪನಿಗಳು ಸಹಕಾರ ನೀಡುತ್ತಿವೆ’ ಎಂದು ವಿವರಿಸಿದರು.

‘ಈ ಹಿಂದೆ‘ಸನ್‌ಸೇರಾ’ ಕಂಪನಿಯಲ್ಲಿಉದ್ಯೋಗಿಯಾಗಿದ್ದ ನಾನು, ‌ಐದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದೇನೆ. ಈ ಸಂದರ್ಭದಲ್ಲಿ ಕೈಸೇರಿರುವ ಉಳಿತಾಯದ ಹಣ ನಾಲ್ಕು ವರ್ಷ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಈ ಅವಧಿಯಲ್ಲಿ ಸದ್ಯದ ಯೋಜನೆಗಳನ್ನು ಪೂರ್ಣಗೊಳಿಸುತ್ತನೆ’ ಎಂದರು.

ಹಲಸೂರು ಕೆರೆಗೂ ಮರುಜೀವ

ನಗರದ ಮಧ್ಯ ಇರುವ ಹಲಸೂರು ಕರೆಯನ್ನು ಶುಚಿಗೊಳಿಸಲು ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಇದೇ ಶನಿವಾರ (ಜೂ.1) ಇದರ ಕೆಲಸ ಆರಂಭಿಸಲಾಗುತ್ತಿದೆ ಎಂದು ಆನಂದ ಮಲ್ಲಿಗವಾಡ ತಿಳಿಸಿದರು.

ಆನಂದ ಮಲ್ಲಿಗವಾಡ

‘1780ರಲ್ಲಿ ಬ್ರಿಟಿಷರು ನಿರ್ಮಿಸಿದ್ದ ಕೆರೆ ಇದು. ಆಗ ಈ ಕೆರೆಯ ನೀರನ್ನು ಜನ ಕುಡಿಯಲು ಬಳಸುತ್ತಿದ್ದರು. ಇದನ್ನು ಮತ್ತೆ ಅದೇ ಸ್ವರೂಪಕ್ಕೆ ತರಬೇಕಿದೆ. ಜಲಮೂಲಕ್ಕೆ ಕಲುಷಿತ ನೀರು ಬರುವುದನ್ನು ತಡೆಯಲು ಬೇಕಿರುವ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ. 2020ರ ವೇಳೆಗೆ ಕೆರೆ ಸುಂದರ ಮತ್ತು ಸ್ವಚ್ಛವಾಗಲಿದೆ’ ಎಂದರು.

‘ಹಲಸೂರು ಲೇಕ್ ರೆಸಿಡೆಂಟ್ಸ್‌ ವೆಲ್‌ಫೇರ್ ಅಸೋಷಿಯೇಷನ್‌’, ಬಿಬಿಎಂಪಿ ಮತ್ತು ಸ್ಥಳೀಯಸಂಘ–ಸಂಸ್ಥೆಗಳ ಸಹಕಾರ ಪಡೆದು ಇದನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.