ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರ | ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

ಪ್ರತಿಯೊಂದು ವಾರ್ಡ್‌ಗೂ ಎಂಜಿನಿಯರ್, ಕಂದಾಯ ಸಿಬ್ಬಂದಿ | ವಾರ್ಷಿಕ ₹137 ಕೋಟಿ ಹೆಚ್ಚುವರಿ ವೆಚ್ಚ

ಆರ್. ಮಂಜುನಾಥ್
Published 30 ಆಗಸ್ಟ್ 2025, 23:56 IST
Last Updated 30 ಆಗಸ್ಟ್ 2025, 23:56 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳಲ್ಲಿ ಒಟ್ಟು 450 ವಾರ್ಡ್‌ಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 23 ಸಾವಿರ ಸಿಬ್ಬಂದಿಯ ಅಗತ್ಯವಿದೆ. ಪ್ರಸ್ತುತವಿರುವ ಉದ್ಯೋಗಿಗಳಿಂತ ಹೆಚ್ಚುವರಿಯಾಗಿ 4,899 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ, ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ದಿನ ಸನ್ನಿಹಿತವಾಗುತ್ತಿದ್ದಂತೆಯೇ, ಜಿಬಿಎ ಸೇರಿದಂತೆ ನಗರ ಪಾಲಿಕೆಗಳು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್), ಬೆಂಗಳೂರು ಮೆಟ್ರೊ ಪಾಲಿಟನ್‌ ಟಾಸ್ಕ್‌ ಫೋರ್ಸ್‌ಗೆ (ಬಿಎಂಟಿಎಫ್‌) ಅಗತ್ಯವಿರುವ ಹುದ್ದೆಗಳ ಮಂಜೂರಿಗೆ ಸರ್ಕಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ.

ಐದು ನಗರ ಪಾಲಿಕೆಗಳಲ್ಲಿ ತಲಾ 110 ವಾರ್ಡ್‌ಗಳಂತೆ ಒಟ್ಟಾರೆ 550 ವಾರ್ಡ್‌ಗಳನ್ನು ರಚಿಸಲು ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದರಿಂದ ಆಡಳಿತಾತ್ಮಕವಾಗಿ ವಾರ್ಷಿಕ ₹298 ಕೋಟಿ ಹೆಚ್ಚುವರಿಯಾಗಿ ವೆಚ್ಚವಾಗುತ್ತಿತ್ತು. ಆದ್ದರಿಂದ, ಪುನರ್‌ವಿಮರ್ಶಿತ ಪ್ರಸ್ತಾವವನ್ನು ಸಲ್ಲಿಸಲಾಗಿದ್ದು, ಒಟ್ಟಾರೆ 100 ವಾರ್ಡ್‌ಗಳನ್ನು ಕಡಿತಗೊಳಿಸಲಾಗಿದೆ. ಇದರಿಂದ ಆಡಳಿತಾತ್ಮಕವಾಗಿ ವಾರ್ಷಿಕ ₹137 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ₹161 ಕೋಟಿ ಉಳಿತಾಯವಾಗುತ್ತಿದೆ. 7ನೇ ವೇತನ ಆಯೋಗದಂತೆ ಸಿಬ್ಬಂದಿ ವೇತನವನ್ನು ಪರಿಗಣಿಸಲಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

ನೈರ್ಮಲ್ಯ ವಿಭಾಗದಲ್ಲಿ ಅತಿಹೆಚ್ಚು (16,807) ಸಿಬ್ಬಂದಿ ಅಗತ್ಯವಿದೆ. ವ್ಯವಸ್ಥಾಪಕರು, ಎಫ್‌ಡಿಎ, ಸ್ಟೆನೊಗ್ರಾಫರ್‌, ಎಸ್‌ಡಿಎ, ಗ್ರೂಪ್‌ ಡಿ, ಚಾಲಕ, ಟೈಪಿಸ್ಟ್‌, ದಫೆದಾರ್‌ ಹುದ್ದೆಗಳನ್ನು ‘ಮಿನಿಸ್ಟೇರಿಯಲ್‌ ಸ್ಟಾಫ್‌’ ಎಂದು ಗುರುತಿಸಲಾಗಿದ್ದು, 1,580 ಹುದ್ದೆಗಳನ್ನು ಸೃಜಿಸಲಾಗಿದೆ. ಕಂದಾಯ, ಸಾರ್ವಜನಿಕ ಆರೋಗ್ಯ, ಎಂಜಿನಿಯರ್‌ ಹುದ್ದೆಗಳು ನಂತರದ ಸ್ಥಾನದಲ್ಲಿವೆ.

ಜಿಬಿಎ, ಬಿಎಸ್‌ಡಬ್ಲ್ಯುಎಂಎಲ್‌ ಹಾಗೂ ಐದು ನಗರ ಪಾಲಿಕೆಗಳಲ್ಲಿ ತಲಾ ಎರಡು ಮುಖ್ಯ ಎಂಜಿನಿಯರ್‌ ಹುದ್ದೆ ಸೃಜಿಸಲಾಗಿದೆ. ಬಿ–ಸ್ಮೈಲ್‌ನಲ್ಲಿ ಐವರು ಮುಖ್ಯ ಎಂಜಿನಿಯರ್‌, ಐವರು ಅಧೀಕ್ಷಕ ಎಂಜಿನಿಯರ್‌ಗಳಿರಲಿದ್ದಾರೆ. ನಗರ ಪಾಲಿಕೆಗಳಲ್ಲಿ ತಲಾ ಮೂವರು ಅಧೀಕ್ಷಕ ಎಂಜಿನಿಯರ್‌, ತಲಾ ಐವರು ಕಾರ್ಯಪಾಲಕ ಎಂಜಿನಿಯರ್‌, ತಲಾ 13 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ತಲಾ 16 ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳಿದ್ದು, ಒಟ್ಟಾರೆ 979 ಎಂಜಿನಿಯರ್‌ಗಳ ಹುದ್ದೆಯನ್ನು ಪ್ರಸ್ತಾವದಲ್ಲಿ ಸೃಜಿಸಲಾಗಿದೆ. ಈಗ 540 ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

450 ವಾರ್ಡ್‌ಗಳು

ಬೆಂಗಳೂರು ಉತ್ತರ ನಗರ ಪಾಲಿಕೆ (ಬೆಂಉನಪಾ); 90 ವಾರ್ಡ್‌

ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಬೆಂದನಪಾ); 90 ವಾರ್ಡ್‌

ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬೆಂಕೇನಪಾ); 90 ವಾರ್ಡ್‌

ಬೆಂಗಳೂರು ಪೂರ್ವ ನಗರ ಪಾಲಿಕೆ (ಬೆಂಪೂನಪಾ); 63 ವಾರ್ಡ್‌

ಬೆಂಗಳೂರು ಪಶ್ಚಿಮ ನಗರ ಪಾಲಿಕೆ (ಬೆಂಪನಪಾ); 117 ವಾರ್ಡ್‌

==

ಒಟ್ಟು 19 ವಿಭಾಗಗಳು

ಆಡಳಿತ, ಪಶು ಸಂಗೋಪನೆ, ಕ್ಲಿನಿಕಲ್‌ ಆರೋಗ್ಯ, ಕೌನ್ಸಿಲ್‌, ಶಿಕ್ಷಣ, ಎಂಜಿನಿಯರಿಂಗ್, ಹಣಕಾಸು ಮತ್ತು ಲೆಕ್ಕ, ಅರಣ್ಯ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಕಾನೂನು ಘಟಕ, ಸಾರ್ವಜನಿಕ ಸಂಪರ್ಕಾಧಿಕಾರಿ, ಸಾರ್ವಜನಿಕ ಆರೋಗ್ಯ, ಕಂದಾಯ– ಆಸ್ತಿ– ಜಾಹೀರಾತು– ಮಾರುಕಟ್ಟೆ; ನೈರ್ಮಲ್ಯ, ಟಿಡಿಆರ್‌, ನಗರ ಯೋಜನೆ, ಕಲ್ಯಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.