ADVERTISEMENT

ಟೆಂಡರ್ ಇಲ್ಲದೆಯೇ ₹4,721 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ: ಬಿಎನ್‌ಪಿ

ಕೆಆರ್‌ಐಡಿಎಲ್‌ಗೆ ಕಾಮಗಾರಿ: ಕೆಟಿಪಿಪಿ ಕಾಯ್ದೆಯ ದುರ್ಬಳಕೆಯ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:48 IST
Last Updated 13 ಅಕ್ಟೋಬರ್ 2021, 20:48 IST

ಬೆಂಗಳೂರು: ನಗರದಲ್ಲಿ ಕೈಗೊಂಡ ₹4,721 ಕೋಟಿ ಮೊತ್ತದ ಯೋಜನೆಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆಯೇ ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಈ ಮೂಲಕ ಕರ್ನಾಟಕ ಪಾರದರ್ಶಕ ಕಾರ್ಯವಿಧಾನಗಳ ಕಾಯ್ದೆ (ಕೆಟಿಪಿಪಿ) ಉಲ್ಲಂಘಿಸಲಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಆರೋಪಿಸಿದೆ.

ಬಿಎನ್‌ಪಿ ಕಳೆದ ಐದು ವರ್ಷಗಳಲ್ಲಿ (2015ರಿಂದ 2020ರವರೆಗಿನ) 19 ವಾರ್ಡ್‌ಗಳಲ್ಲಿ ಬಿಬಿಎಂಪಿ ಅನುಮೋದಿಸಿದ ಮತ್ತು ಕೈಗೊಂಡ ಯೋಜನೆಗಳ ವಿಶ್ಲೇಷಣೆ ಮಾಡಿದೆ. ಈ ಅವಧಿಯಲ್ಲಿ ಒಟ್ಟು ₹10,018 ಕೋಟಿ ಮೊತ್ತದ ಒಟ್ಟು 28,1314 ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಆದರೆ, ₹4,721 ಕೋಟಿ ಮೊತ್ತದ ಶೇಕಡ 50ರಷ್ಟು ಯೋಜನೆಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆಯೇ ಕೆಆರ್‌ಐಡಿಎಲ್‌ಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ದೊಡ್ಡ ಯೋಜನೆಗಳನ್ನು ಸಣ್ಣ ವಿಭಾಗಗಳಾಗಿ ವಿಭಜಿಸಲಾಗುತ್ತದೆ ಮತ್ತು ಕೆಟಿಪಿಪಿ ಕಾಯ್ದೆಯ ನಿಯಮಗಳಿಂದ ತಪ್ಪಿಸಿಕೊಳ್ಳಲು ಟೆಂಡರ್‌ಗಳಿಲ್ಲದೆಯೇ ಹಲವಾರು ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಮೂಲಕ ಸಹಜವಾಗಿಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾರ್ಗ ಅನುಸರಿಸಲಾಗಿದೆ ಎಂದು ದೂರಿದೆ.

ADVERTISEMENT

ಒಪ್ಪಂದದ ಗುತ್ತಿಗೆಗಳ ಮೂಲಕ ಹಣ ವರ್ಗಾವಣೆಯ ಅನುಮಾನಸ್ಪದವಾಗಿದ್ದರೂ ಹೆಚ್ಚಿನ ಟೆಂಡರ್‌ಗಳು ಸಮರ್ಪಕ ಪ್ರಕ್ರಿಯೆಯೂ ಇಲ್ಲದೆಯೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಕೆಆರ್‌ಐಡಿಎಲ್‌ ಈ ಒಪ್ಪಂದಗಳನ್ನು ಕೈಗೆತ್ತಿಕೊಳ್ಳುವ ಏಜೆನ್ಸಿಯಾಗಿದೆ ಮತ್ತು ಪ್ರತಿ ಯೋಜನೆಯಲ್ಲಿಯೂ ಶೇಕಡ 5ರಿಂದ 15ರಷ್ಟು ಕಮಿಷನ್‌ ನೀಡಲಾಗುತ್ತಿದೆ. ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಮತ್ತು ಕಮಿಷನ್‌ನೊಂದಿಗೆ ಒಬ್ಬ ಗುತ್ತಿಗೆದಾರರಿಗೆ ನೀಡಲಾದ ಸಾವಿರಾರು ಕೋಟಿ ಯೋಜನೆಗಳು ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಹೆಚ್ಚಿನ
ಅವಕಾಶ ನೀಡುತ್ತದೆ. ಇದು ನಿಯಮಗಳು, ಪ್ರಕ್ರಿಯೆ ಮತ್ತು ಆಡಳಿತದ ಮೂಲ ತತ್ವಗಳ ಸಂಪೂರ್ಣಉಲ್ಲಂಘನೆಯಾಗಿದೆ ಎಂದು
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.