ವಿಧಾನಸೌಧ
ಬೆಂಗಳೂರು: ನಿವೇಶನದ ಮಾರ್ಗಸೂಚಿ ದರದ ಶೇ 50ರಷ್ಟು ಶುಲ್ಕ ಪಾವತಿಸಿಕೊಂಡು, ಶೇ 60ರವರೆಗೂ ಪ್ರೀಮಿಯಂ ಎಫ್‌ಎಆರ್ ನೀಡಲು ಅವಕಾಶ ಕಲ್ಪಿಸಿ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.
ವಿಧಾನಮಂಡಲದಲ್ಲಿ ಅಂಗೀಕಾರವಾಗಿದ್ದ ‘ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ’ವನ್ನು (ಪ್ರೀಮಿಯಂ ಎಫ್‌ಎಆರ್) ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಹಲವು ಪ್ರಶ್ನೆಗಳನ್ನು ಕೇಳಿ, ರಾಜ್ಯಪಾಲರು ಸರ್ಕಾರಕ್ಕೆ ಮಸೂದೆಯನ್ನು ವಾಪಸ್ ಕಳುಹಿಸಿದ್ದರು. ಅದಕ್ಕೆ ಉತ್ತರ ನೀಡುವ ಬದಲು ಹೊಸ ನಿಯಮಗಳನ್ನು ರೂಪಿಸಿ, ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಲಾಗಿದೆ.
‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ –2015’ರ ಸೆಕ್ಷನ್ 13–ಇಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಪ್ರೀಮಿಯಂ ಎಫ್‌ಎಆರ್‌ಗಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳನ್ನು ಬದಲಾಯಿಸಲಾಗಿದೆ.
ನಕ್ಷೆ ಅನುಮೋದನೆಗೊಂಡು ಕಟ್ಟಡ ನಿರ್ಮಾಣ ಮಾಡಿರುವವರ ಹಾಗೂ ನಿರ್ಮಾಣ ಮಾಡುತ್ತಿರುವವರು ‘ಪ್ರೀಮಿಯಂ ಎಫ್‌ಎಆರ್’ ಪಡೆದುಕೊಂಡು, ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಬಹುದಾಗಿದೆ. ಎಫ್‌ಎಆರ್ ಅನ್ನು ಆ ಕಟ್ಟಡದಲ್ಲಿಯೇ ಉಪಯೋಗಿಸಿಕೊಳ್ಳಬೇಕಾಗಿದ್ದು, ಯಾರಿಗೂ ವರ್ಗಾಯಿಸುವಂತಿಲ್ಲ.
ಕಟ್ಟಡ ನಿರ್ಮಿಸುವವರು ಮಾರ್ಗಸೂಚಿದ ದರದನ್ವಯ ಶುಲ್ಕ ಪಾವತಿಸಿ ಪ್ರೀಮಿಯಂ ಎಫ್‌ಎಆರ್‌ಗಳನ್ನು ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದು. ಈ ಮೂಲಕ ಕಟ್ಟಡದ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು. ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್ ಪ್ಲಾನ್‌ನ ವಲಯ ನಿಯಮಗಳ ಅನ್ವಯವೇ ಪ್ರೀಮಿಯಂ ಎಫ್‌ಎಆರ್‌ಗೆ ಅನುಮತಿ ನೀಡಲಾಗುತ್ತದೆ.
9 ಮೀಟರ್‌ನಿಂದ 12 ಮೀಟರ್‌ವರೆಗಿನ ಅಗಲದ ರಸ್ತೆ ಹೊಂದಿರುವ ಕಟ್ಟಡಗಳ ನಿರ್ಮಿತ ಪ್ರದೇಶಕ್ಕನುಗುಣವಾಗಿ ಶೇ 20ರಷ್ಟು ಪ್ರೀಮಿಯಂ ಎಫ್‌ಎಆರ್ ನೀಡಲಾಗುತ್ತದೆ. 12 ಮೀಟರ್‌ನಿಂದ 18 ಮೀಟರ್ ಅಗಲದ ರಸ್ತೆ ಹೊಂದಿರುವ ಕಟ್ಟಡಗಳಿಗೆ ಶೇ 40 ಹಾಗೂ 18 ಮೀಟರ್‌ಗೂ ಹೆಚ್ಚಿನ ಅಗಲದ ರಸ್ತೆ ಹೊಂದಿರುವ ಕಟ್ಟಡಗಳು ಶೇ 60ರಷ್ಟು ಗರಿಷ್ಠ ಪ್ರೀಮಿಯಂ ಎಫ್‌ಎಆರ್ ಪಡೆಯಬಹುದು. ಪ್ರೀಮಿಯಂ ಎಫ್‌ಎಆರ್ ಜೊತೆಗೆ ಟಿಡಿಆರ್ ಅನ್ನೂ ಪಡೆಯಬಹುದಾಗಿದೆ ಎಂದು ನಿಯಮಗಳಲ್ಲಿ ವಿವರಿಸಲಾಗಿದೆ.
ಪ್ರೀಮಿಯಂ ಎಫ್ಎಆರ್ ಪಡೆದರೂ, ಕಟ್ಟಡದ ಅನುಮೋದಿತ ವಿಸ್ತೀರ್ಣಕ್ಕಿಂತ ಶೇ 40ರಷ್ಟು ಮಾತ್ರ ಹೆಚ್ಚುವರಿಯಾಗಿ ನಿರ್ಮಿಸಬಹುದು. ಉಳಿದಿದ್ದನ್ನು ಟಿಡಿಆರ್ ಪಡೆಯುವುದಕ್ಕೆ ಅವಕಾಶವಿದ್ದು, ಇದನ್ನು ಮಾರಾಟ ಮಾಡಿಕೊಳ್ಳಲೂ ಹೊಸ ನಿಯಮದಲ್ಲಿ ಅನುವು ಮಾಡಿಕೊಡಲಾಗಿದೆ.
ಸೆಟ್‌ಬ್ಯಾಕ್‌ನಿಂದ ವಿನಾಯಿತಿ!
‘ಪ್ರೀಮಿಯಂ ಎಫ್ಎಆರ್ ಪಡೆದಾಗ ಕಟ್ಟಡದ ಎತ್ತರ ಹೆಚ್ಚಾಗುತ್ತದೆ. ಇದಕ್ಕೆ ಅಗತ್ಯವಾದ ರಚನಾತ್ಮಕ ವಿನ್ಯಾಸ ಹಾಗೂ ಸದೃಢತೆಯನ್ನು ಕಟ್ಟಡ ಹೊಂದಿರುವಂತೆ ನೋಡಿಕೊಳ್ಳುವುದು ಮಾಲೀಕನ ಕರ್ತವ್ಯವಾಗಿರುತ್ತದೆ. ಪ್ರೀಮಿಯಂ ಎಫ್‌ಎಆರ್ ಪಡೆದು ಹೆಚ್ಚುವರಿ ಅಂತಸ್ತು ನಿರ್ಮಿಸಿದಾಗ ಉಂಟಾಗುವ ಸೆಟ್‌ಬ್ಯಾಕ್‌ನಿಂದ ವಿನಾಯಿತಿ ನೀಡಲಾಗುತ್ತದೆ’ ಎಂದು ನಗರ ಯೋಜನೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪ್ರೀಮಿಯಂ ಎಫ್‌ಎಆರ್ ವ್ಯವಸ್ಥೆಯಿಂದ 30 ಅಡಿx 40 ಅಡಿ ಅಥವಾ 40 ಅಡಿx 60 ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳಿಗೆ ಅನುಕೂಲವಾಗುವುದಿಲ್ಲ. ಅತಿಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್ ಗಳಿಗೇ ‘ಪ್ರೀಮಿಯಂ ಎಫ್‌ಎಆರ್’ ಅತ್ಯಂತ ಉಪಯೋಗವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.