ADVERTISEMENT

ದೇವನಗುಂದಿ ರಸ್ತೆ ದುರಸ್ತಿ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:40 IST
Last Updated 29 ಜನವರಿ 2018, 19:40 IST
ರಸ್ತೆಗೆ ಜಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡುತ್ತಿರುವುದು
ರಸ್ತೆಗೆ ಜಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡುತ್ತಿರುವುದು   

ಬೆಂಗಳೂರು: ದೇವನಗುಂದಿಯ ತೈಲ ಹಾಗೂ ಅಡುಗೆ ಅನಿಲ ದಾಸ್ತಾನು ಘಟಕದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ದುರಸ್ತಿ ಕೆಲಸ ಭಾನುವಾರದಿಂದ ಆರಂಭವಾಗಿದೆ.

ಜೆಸಿಬಿ ಯಂತ್ರ ಹಾಗೂ ಕೆಲಸಗಾರರ ಸಮೇತ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದರು. 8 ಕಿ.ಮೀವರೆಗಿರುವ ರಸ್ತೆಯ ಹಲವೆಡೆ ತಗ್ಗುಗಳು ಬಿದ್ದಿವೆ. ಆ ಸ್ಥಳಕ್ಕೆ ಜಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡಲಾಗುತ್ತಿದೆ.

‘ರಸ್ತೆಯ ಅಕ್ಕ–ಪಕ್ಕದಲ್ಲಿ ಜಮೀನುಗಳಿವೆ. ಬೆಳೆಗೆ ಹರಿಸುವ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅದೇ ಕಾರಣಕ್ಕೆ ರಸ್ತೆಯಲ್ಲಿ ತಗ್ಗುಗಳು ಬೀಳುತ್ತಿವೆ. ನೀರು ಹರಿದು ಬರುವ ಜಾಗದಲ್ಲಿ ಮಣ್ಣು ಸುರಿಯುತ್ತಿದ್ದೇವೆ. ಅದರಿಂದ ಹರಿಯುವಿಕೆ ಬಂದ್‌ ಆಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಟ್ಯಾಂಕರ್‌ಗಳ ಓಡಾಟ ಹೆಚ್ಚಿರುವುದರಿಂದ, ರಸ್ತೆಯು ಪದೇ ಪದೇ ಹದಗೆಡುತ್ತಿದೆ. ಮೂರು ವರ್ಷದಲ್ಲಿ ಹಲವು ಬಾರಿ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ. ಪುನಃ ಸಮಸ್ಯೆ ಉದ್ಭವಿಸುತ್ತಿದೆ. ಶಾಶ್ವತ ಪರಿಹಾರಕ್ಕೆ ಯೋಚಿಸುತ್ತಿದ್ದೇವೆ’ ಎಂದರು.

ಡಾಂಬರೀಕರಣ ಮಾಡಲಿ: ‘ಕೇವಲ ಜಲ್ಲಿ ಕಲ್ಲು ಹಾಕಿ, ರಸ್ತೆ ಸಮತಟ್ಟು ಮಾಡಿದರೆ ಸಾಲದು. ಡಾಂಬರೀಕರಣ ಮಾಡಿ ಟ್ಯಾಂಕರ್‌ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಆ ರೀತಿಯಾದರೆ ಮಾತ್ರ ಚಾಲಕರು ನೆಮ್ಮದಿಯಿಂದ ಟ್ಯಾಂಕರ್‌ ಓಡಿಸಲಿದ್ದಾರೆ’ ಎಂದು ತೈಲ ಪೂರೈಕೆ ಟ್ಯಾಂಕರ್‌ಗಳ ಚಾಲಕರ ಸಂಘದ ಅಧ್ಯಕ್ಷ ಶ್ರೀರಾಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.