ADVERTISEMENT

ಪದೇ ಪದೇ ಸಂಸದರ ವೇತನ ಹೆಚ್ಚಳ ಬೇಡ

ಸಂಸದ ವರುಣ್‌ ಗಾಂಧಿ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ವರುಣ್ ಗಾಂಧಿ ಅವರನ್ನು ವಿದ್ಯಾರ್ಥಿನಿ ಅಭಿನಂದಿಸಿದರು
ವರುಣ್ ಗಾಂಧಿ ಅವರನ್ನು ವಿದ್ಯಾರ್ಥಿನಿ ಅಭಿನಂದಿಸಿದರು   

ಬೆಂಗಳೂರು: ಶಾಸಕರು ಹಾಗೂ ಸಂಸದರ ವೇತನ ಹೆಚ್ಚಳ ನಿರ್ಧರಿಸಲು ಸಾಂವಿಧಾನಿಕ ಸಮಿತಿ ರಚಿಸಬೇಕು ಎಂದು ಸಂಸದ ವರುಣ್‌ ಗಾಂಧಿ ಒತ್ತಾಯಿಸಿದರು.

ನಗರದ ಆಕ್ಸ್‌ಫರ್ಡ್‌ ವಿಜ್ಞಾನ ಮತ್ತು ವ್ಯವಹಾರ ನಿರ್ವಹಣಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ನಾಗರಿಕರ ಪಾತ್ರದ ವಿಸ್ತರಣೆ: ಸವಾಲುಗಳು ಮತ್ತು ಅವಕಾಶಗಳು’ ಕುರಿತು ಉಪನ್ಯಾಸ ನೀಡಿದರು.

5 ವರ್ಷಗಳಲ್ಲಿ ಸಂಸದರ ವೇತನ ಹಾಗೂ ಭತ್ಯೆಯನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಹೀಗೆ ಪದೇಪದೇ ವೇತನ ಹೆಚ್ಚಿಸಿಕೊಳ್ಳುವುದು ಒಳ್ಳೆಯ ನಡೆಯಲ್ಲ. ಜೀವನ ನಿರ್ವಹಣೆಯನ್ನು ಗಮನದಲ್ಲಿ ಇಟ್ಟುಕೊಂಡು ವೇತನ ನಿರ್ಧರಿಸಬೇಕು. ಇದಕ್ಕಾಗಿ ಸಮಿತಿ ಅಗತ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ವೈದ್ಯ, ಎಂಜಿನಿಯರ್‌, ವಿಜ್ಞಾನಿ, ಶಿಕ್ಷಕರು, ರೈತರು ತಮ್ಮ ವೇತನವನ್ನು ನಿರ್ಧರಿಸಲು ಹಾಗೂ ಹೆಚ್ಚಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಮಹಿಳಾ ಮೀಸಲಾತಿ ಒಳ್ಳೆಯ ಕಲ್ಪನೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇದು ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ಮಹಿಳೆಯರು ನೆಪಮಾತ್ರಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಅಥವಾ ಅಧ್ಯಕ್ಷೆ ಆಗಿರುತ್ತಾರೆ. ಎಲ್ಲ ಅಧಿಕಾರವನ್ನೂ ಅವರ ಗಂಡಂದಿರೇ ಚಲಾಯಿಸುತ್ತಾರೆ. ಗ್ರಾಮೀಣ ಭಾಗದ ಎಷ್ಟೋ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ವೇದಿಕೆಯಲ್ಲಿ ನನ್ನ ಪಕ್ಕ ಸದಸ್ಯೆ ಬದಲಿಗೆ ಅವರ ಪತಿ ಕುಳಿತುಕೊಳ್ಳುತ್ತಾರೆ. ಇದು ಬೇಸರದ ಸಂಗತಿ’ ಎಂದರು.
**
ನಾನು ಒಬ್ಬನೇ ಎಂಬ ಭಾವನೆಯನ್ನು ಕೈಬಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿ ಮುನ್ನಡೆಯಬೇಕು. ಆಗ ಇಡೀ ದೇಶವನ್ನು ಬದಲಾಯಿಸಬಹುದು.
–ವರುಣ್‌ ಗಾಂಧಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.