
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಅಂಜನಾಪುರ ಟೌನ್‌ಶಿಪ್ ಸೇರಿ ಎಂಟು ಬಡಾವಣೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಹಸ್ತಾಂತರಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
ಬನಶಂಕರಿ 6ನೇ ಹಂತ (1ರಿಂದ 11ನೇ ಬ್ಲಾಕ್), ಬನಶಂಕರಿ 6ನೇ ಹಂತ ಮುಂದವರಿದ ಬಡಾವಣೆ (4ನೇ ಎಚ್, ಬಿ, ಟಿ ಬ್ಲಾಕ್), ಜಯಪ್ರಕಾಶ್ ನಾರಾಯಣ ನಗರ (ಜೆ.ಪಿ.ನಗರ) 9ನೇ ಫೇಸ್, ಜಯಪ್ರಕಾಶ್ ನಾರಾಯಣ ನಗರ (ಜೆ.ಪಿ.ನಗರ) 8ನೇ ಫೇಸ್, ಅಂಜನಾಪುರ ಟೌನ್‌ಶಿಪ್ ಬಡಾವಣೆ, ಅಂಜನಾಪುರ ಮುಂದುವರಿದ ಬಡಾವಣೆ, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ (1 ರಿಂದ 6ನೇ ಬ್ಲಾಕ್), ಸರ್ ಎಂ.ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆಯನ್ನು (7ರಿಂದ 9ನೇ ಬ್ಲಾಕ್) ಹಸ್ತಾಂತರಿಸಲು ಆದೇಶ ಹೊರಡಿಸಿದೆ.
ಬಿಡಿಎ ಹಸ್ತಾಂತರಿಸುವ ಬಡಾವಣೆಗಳಲ್ಲಿ ಬಾಕಿ ಉಳಿದ ತೆರಿಗೆ ವಸೂಲಿ ಮಾಡಲು ಆಯಾ ನಗರ ಪಾಲಿಕೆಗಳಿಗೆ ಅಧಿಕಾರ ನೀಡಲಾಗಿದೆ.
ಎಂಟು ಬಡಾವಣೆಗಳನ್ನು ಮುಂದಿನ ನಿರ್ವಹಣೆಗಾಗಿ ಹಾಲಿ ಯಾವ ಸ್ಥಿತಿಯಲ್ಲಿ ಇವೆಯೋ ಹಾಗೆಯೇ ಆಯಾ ಪಾಲಿಕೆಗಳಿಗೆ ಹಸ್ತಾಂತರ ಮಾಡಬೇಕು. ಇದನ್ನು ದೃಢಪಡಿಸಿಕೊಳ್ಳಲು ಬಿಡಿಎ, ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಜಂಟಿ ಪರಿವೀಕ್ಷಣೆ ನಡೆಸಿ ಸಹಿ ಮಾಡಬೇಕು.
ಹಸ್ತಾಂತರಿಸುವಾಗ ಬಡಾವಣೆಯಲ್ಲಿನ ರಸ್ತೆ, ಉದ್ಯಾನ ಇತರೆ ಮೌಲಸೌಕರ್ಯ ಅಭಿವೃದ್ಧಿ ಹೊಂದದಿದ್ದಲ್ಲಿ ಇದಕ್ಕೆ ತಗುಲುವ ವೆಚ್ಚದ ಶೇಕಡ 50ರಷ್ಟು ಮೊತ್ತವನ್ನು ಪಾಲಿಕೆಗಳಿಗೆ ಬಿಡಿಎ ಸಂದಾಯ ಮಾಡಬೇಕು ಎಂದು ಸೂಚಿಸಲಾಗಿದೆ. ಜಲಮಂಡಳಿಗೂ ಇದೇ ನಿಯಮ ಅನ್ವಯಿಸಿ ಆದೇಶ ಹೊರಡಿಸಲಾಗಿದೆ.
ಬಿಡಿಎನಿಂದ ಜಮಾ ಮಾಡುವ ಶೇಕಡ 50ರಷ್ಟು ಮೊತ್ತದ ಜತೆಗೆ ಸಂಬಂಧಪಟ್ಟ ನಗರ ಪಾಲಿಕೆಗಳು, ಜಲಮಂಡಳಿ ಶೇಕಡ 50ರಷ್ಟು ಮೊತ್ತ ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಹಸ್ತಾಂತರಗೊಂಡ ಬಡಾವಣೆಗಳ ದಾಖಲಾತಿಗಳನ್ನು ನಿರ್ವಹಿಸಬೇಕು. ಉದ್ಯಾನ, ಬಯಲು ಜಾಗ ಹಾಗೂ ಆಟದ ಮೈದಾನಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸುವಂತೆ ಸೂಚಿಸಿದೆ. ಒಮ್ಮೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿವೇಶನ/ಮನೆಗಳಿಗೆ ಖಾತಾ ವಿತರಣೆ ಹಾಗೂ ತೆರಿಗೆ ಸಂಗ್ರಹ ಪಾಲಿಕೆ ವಹಿಸಿಕೊಳ್ಳಲಿದೆ. ಆದರೆ, ನಿಯಮದಂತೆ ಸಿ.ಎ. ನಿವೇಶನಗಳು ಬಿಡಿಎ ಮಾಲೀಕತ್ವದಲ್ಲಿರುವ ಬಗ್ಗೆ ವಿವಾದ ಇದ್ದಲ್ಲಿ ಇಂತಹ ಪ್ರದೇಶಗಳನ್ನು ಹಸ್ತಾಂತರ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.