ADVERTISEMENT

ಜಿಲ್ಲೆಗಳಿಗೆ 900 ವೈದ್ಯರ ನಿಯೋಜನೆ: ಸಿಎಂ

ಪಿ.ಜಿ ಕೌನ್ಸೆಲಿಂಗ್‌ ಮುಗಿಸಿದ ವೈದ್ಯರಿಗೆ ಕೋವಿಡ್‌ ನಿರ್ವಹಣೆ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:38 IST
Last Updated 10 ಸೆಪ್ಟೆಂಬರ್ 2020, 19:38 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ಮುಗಿದಿದ್ದು ಇನ್ನೆರಡು ದಿನಗಳಲ್ಲಿ 900ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗುವುದು. ಇದರಿಂದ ಕೋವಿಡ್‌ ನಿಭಾಯಿಸಲು ಸಹಾಯಕವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ವಿವಿಧ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಸಿಇಒಗಳ ಸಭೆಯಲ್ಲಿ ಅವರು ಮಾತನಾಡಿ ಈ ವಿಷಯ ತಿಳಿಸಿದರು. ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಮರಣ ಪ್ರಮಾಣವನ್ನು ತಗ್ಗಿಸುವುದು ಆದ್ಯತೆಯಾಗಬೇಕು ಎಂದೂ ಮುಖ್ಯಮಂತ್ರಿ ತಿಳಿಸಿದರು.

ದಸರಾ ಇರುವುದರಿಂದ ಮೈಸೂರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇದೆ, ಅಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಬೇಕು. ಅಲ್ಲದೆ, ಇತರ ಜಿಲ್ಲೆಗಳಲ್ಲೂ ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಕಿಟ್‌ಗಳನ್ನು ಒದಗಿಸಲಾಗುವುದು. ಪ್ರಯೋಗಾಲಯಗಳು ಕಡಿಮೆ ಇದ್ದಲ್ಲಿ ಪಕ್ಕದ ಜಿಲ್ಲೆಗಳ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಬೂತ್‌ ಮಟ್ಟದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಟಾಸ್ಕ್‌ಫೋರ್ಸ್‌ಗಳು ಅಂತಹ ಪ್ರದೇಶಗಳನ್ನು ಗುರುತಿಸಬೇಕು. ಆಕ್ಸಿಜನ್‌ ಸಮಸ್ಯೆ ಇದ್ದರೆ, ಹೆಚ್ಚು ಆಕ್ಸಿಜನ್‌ ಲಭ್ಯವಿರುವ ಜಿಲ್ಲೆಗಳಿಂದ ಪಡೆದುಕೊಳ್ಳಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಐಸಿಯುಗಳಲ್ಲಿ ವೆಂಟಿಲೇಟರ್‌ಗಳ ಲಭ್ಯತೆ ಬಗ್ಗೆಯೂ ನಿಗಾ ವಹಿಸಬೇಕು. ಗೃಹ ನಿರ್ಬಂಧದಲ್ಲಿ ಇರುವವರ ಬಗ್ಗೆ ಮೇಲ್ವಿಚಾರಣೆ ಕಟ್ಟುನಿಟ್ಟಾಗಿ ಮಾಡಬೇಕು. ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.