ADVERTISEMENT

ಜಿಎಸ್‌ಟಿ ಹೆಸರಿನಲ್ಲಿ ಕಂಪನಿಗೆ ₹ 9.60 ಕೋಟಿ ವಂಚನೆ: ಲೆಕ್ಕಾಧಿಕಾರಿಗಳ ಬಂಧನ

ಮೂರು ವರ್ಷಗಳ ಜಿಎಸ್‌ಟಿ ಪಾವತಿ ನೆಪದಲ್ಲಿ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 20:05 IST
Last Updated 26 ಜನವರಿ 2023, 20:05 IST
   

ಬೆಂಗಳೂರು: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೆಸರಿನಲ್ಲಿ ಕಂಪನಿಗೆ ₹ 9.60 ಕೋಟಿ ವಂಚಿಸಿದ ಆರೋಪದಡಿ ಇಬ್ಬರು ಲೆಕ್ಕಾಧಿಕಾರಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಹಾಗೂ ವಿನಯ್ ಬಾಬು ಬಂಧಿತರು. ಇವರಿಬ್ಬರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಆಟೋಮೇಟಿವ್ ಪ್ರೈವೇಟ್ ಲಿಮಿಟೆಡ್ ಮಾಲೀಕರು ವಂಚನೆ ಸಂಬಂಧ ಸದಾಶಿವನಗರ ಠಾಣೆಗೆ 2022ರ ನವೆಂಬರ್‌ನಲ್ಲಿ ದೂರು ನೀಡಿ
ದ್ದರು. ಕಂಪನಿ ಕಚೇರಿ ಇರುವ ಸ್ಥಳದ ಆಧಾರದಲ್ಲಿ ಸಂಜಯನಗರ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿತ್ತು.’

ADVERTISEMENT

‘ಕಂಪನಿಯ ಮೂರು ವರ್ಷಗಳ ಅವಧಿಯ ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಿದ್ದ ಆರೋಪಿಗಳು, ಸರ್ಕಾರಕ್ಕೆ ₹ 9.60 ಕೋಟಿ ಜಿಎಸ್‌ಟಿ ಪಾವತಿ ಮಾಡಬೇಕೆಂದು ಹೇಳಿದ್ದರು. ಅದನ್ನು ನಂಬಿದ್ದ ದೂರುದಾರರು, ಹಂತ ಹಂತವಾಗಿ ಹಣ ನೀಡಿದ್ದರು. ಇತ್ತೀಚೆಗೆ ಆರೋಪಿಗಳ ಲೆಕ್ಕದ ಬಗ್ಗೆ ದೂರುದಾರರಿಗೆ ಅನುಮಾನ ಬಂದಿತ್ತು. ಬೇರೊಬ್ಬ ಲೆಕ್ಕಾಧಿಕಾರಿ ಬಳಿ ಪರಿಶೀಲನೆ ನಡೆಸಿದಾಗ, ಆರೋಪಿಗಳ ಕೃತ್ಯ ಬಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ತಿ ಖರೀದಿ, ಐಷಾರಾಮಿ ಜೀವನ: ‘ವಂಚನೆಯಿಂದ ಪಡೆದಿದ್ದ ಹಣವನ್ನು ಹಂಚಿಕೊಂಡಿದ್ದ ಆರೋಪಿಗಳು, ಹಲವೆಡೆ ಆಸ್ತಿ ಖರೀದಿಸಿದ್ದಾರೆ. ಅವುಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್‌ ಸಹ ಖರೀದಿಸಿದ್ದಾರೆ. ಜೊತೆಗೆ, ಇಬ್ಬರೂ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.