ADVERTISEMENT

ಹೋಟೆಲ್ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಪರೀಕ್ಷೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 21:35 IST
Last Updated 12 ಮಾರ್ಚ್ 2021, 21:35 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಹೋಟೆಲ್ ಸಿಬ್ಬಂದಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.

ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಜತೆ ಆನ್‌ಲೈನ್ ಸಭೆ ನಡೆಸಿದ ಅವರು, ‘ಹೋಟೆಲ್‌ಗಳ ಬಳಿ ಪಾಲಿಕೆ ತಂಡ ಬಂದು ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಿದೆ. ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಕೂಡಲೇ ಐಸೋಲೇಟ್ ಮಾಡಿದಾಗ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ. ಜೊತೆಗೆ ಮುಂಜಾಗ್ರತೆ ವಹಿಸಬಹುದಾಗಿದೆ. ಹೋಟೆಲ್ ಮಾಲೀಕರು ಸಹಕರಿಸಬೇಕು’ ಎಂದು ಹೇಳಿದರು.

ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಡುಗೆ ಮಾಡುವವರು, ಊಟ ಬಡಿಸುವವರು ಕೈಗವಸು ಮತ್ತು ಮಾಸ್ಕ್ ಧರಿಸಬೇಕು. ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ ಹೋಟೆಲ್ ಒಳಗೆ ಬರಲು ಅನುಮತಿ ನೀಡಬಾರದು. ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ಮಾತ್ರ ಮಾಸ್ಕ್ ತೆರೆಯಲು ಅವಕಾಶ ನೀಡಬೇಕು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನ್ ಮಾಡಿಯೇ ಒಳಗೆ ಬಿಡಬೇಕು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಡಬೇಕು ಎಂದು ತಿಳಿಸಿದರು.

ADVERTISEMENT

ಬೀದಿ ಬದಿಯ ಹೋಟೆಲ್‌ಗಳ ಮೇಲೆ ಮಾರ್ಷಲ್‌ಗಳು ನಿಗಾ ವಹಿಸಲಿದ್ದು, ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಿದ್ದಾರೆ ಎಂದರು.

ಹೋಟೆಲ್ ಸಿಬ್ಬಂದಿಯಲ್ಲಿ 60 ವರ್ಷ ಮೇಲ್ಪಟ್ಟವರು ಅಥವಾ ಅನ್ಯ ಕಾಯಿಲೆಗಳಿಂದ ಬಳಲುವವರಿದ್ದರೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಉಚಿತವಾಗಿ ಲಸಿಕೆ ಪಡೆಯಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.