ADVERTISEMENT

Aero India: ಗುರಿ ಧ್ವಂಸ ಮಾಡಬಲ್ಲ ಅಗೋಚರ ಯುಎವಿ

ಖಲೀಲಅಹ್ಮದ ಶೇಖ
Published 11 ಫೆಬ್ರುವರಿ 2025, 21:34 IST
Last Updated 11 ಫೆಬ್ರುವರಿ 2025, 21:34 IST
ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ–2025 ವೈಮಾನಿಕ ಪ್ರದರ್ಶನದಲ್ಲಿ ಮಾನವರಹಿತ ವೈಮಾನಿಕ ವಾಹನವನ್ನು ಪ್ರದರ್ಶನಕ್ಕೆ ಇಟ್ಟಿರುವುದು
ಪ್ರಜವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ–2025 ವೈಮಾನಿಕ ಪ್ರದರ್ಶನದಲ್ಲಿ ಮಾನವರಹಿತ ವೈಮಾನಿಕ ವಾಹನವನ್ನು ಪ್ರದರ್ಶನಕ್ಕೆ ಇಟ್ಟಿರುವುದು ಪ್ರಜವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಶತ್ರು ಪಾಳಯದ ರೇಡಾರ್‌ ಸಂಪರ್ಕಕ್ಕೂ ಸಿಗದಂತೆ ಮುನ್ನುಗ್ಗಿ, ನಿಗದಿತ ಗುರಿಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯವುಳ್ಳ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಅತಿ ವೇಗದ ಮಾನವರಹಿತ ವೈಮಾನಿಕ ವಾಹನವನ್ನು (ಯುಎವಿ) ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ರೂಪಿಸಿದೆ. ಇದು ಭಾರತೀಯ ವಾಯು ಪಡೆಯ ಬಲ ಹೆಚ್ಚಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಂಗ ಸಂಸ್ಥೆಯಾದ ಎಡಿಇ ಈ ಯುಎವಿಯನ್ನು ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೊ ಇಂಡಿಯಾ–2025’ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಇದು ನೋಡುಗರ ಗಮನ ಸೆಳೆಯುತ್ತಿದೆ.

‘ಬಾಲರಹಿತ (ಟೇಲ್‌ಲೆಸ್‌ ಕಾನ್ಫಿಗರೇಷನ್‌) ಸಂರಚನೆ ಹೊಂದಿದ ಯುಎವಿ, ರಹಸ್ಯವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನ ಹೊಂದಿದೆ. ಇದು ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳಲ್ಲಿದೆ. ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿರುವ ದೇಶವು ವೈಮಾನಿಕ ಕ್ಷೇತ್ರದ ತಂತ್ರಜ್ಞಾನದಲ್ಲಿ ಪರಿಪಕ್ವತೆ ಸಾಧಿಸುತ್ತಿರುವುದಕ್ಕೆ ಇದು ಸಾಕ್ಷಿ’ ಎಂದು ಎಡಿಇ ನಿರ್ದೇಶಕ ದಿಲೀಪ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಯುಎವಿಯನ್ನು ಎಡಿಇ ವಿನ್ಯಾಸಗೊಳಿಸಿದ್ದು, ಪ್ರಯೋಗಾರ್ಥ ಹಾರಾಟದಲ್ಲಿ ಯಶಸ್ಸು ಕಂಡಿದೆ. ದೇಶೀಯವಾಗಿ ಸಿದ್ಧಪಡಿಸಿದ ಎರಡು ಮೂಲ ಮಾದರಿಗಳನ್ನು ಬಳಸಿಕೊಂಡು ಸಂರಚನೆಯಲ್ಲಿ ಸುಧಾರಣೆ ಮಾಡಲಾಗಿದೆ. ಹಾರಾಟವನ್ನು ನಿಯಂತ್ರಿಸುವ ಏವಿಯಾನಿಕ್ಸ್‌ ವ್ಯವಸ್ಥೆ, ಹಾರಾಟದ ಕಾರ್ಯಾಚರಣೆಯು ಉತ್ತಮಗೊಂಡಿದೆ. ಈ ಹಿಂದಿನ ಡ್ರೋನ್‌ಗಳು ಲಂಬಾಕಾರದ ರೆಕ್ಕೆಗಳನ್ನು ಹೊಂದಿರುತ್ತಿದ್ದವು. ಇದು ಬಾಲ ರಹಿತ ವ್ಯವಸ್ಥೆ ಹೊಂದಿದ್ದು, ಮಾತೃ ರೇಡಾರ್‌ ಹೊರತುಪಡಿಸಿ ಉಳಿದವುಗಳ ಸಂಪರ್ಕಕ್ಕೆ ಸಿಗದೇ ರಹಸ್ಯವಾಗಿ ಕಾರ್ಯಾಚರಣೆ ನಡೆಸಲಿದೆ’ ಎಂದು ವಿವರಿಸಿದರು.

‘ಇದು ನಾವಿಗೇಶನ್‌ ಸೌಕರ್ಯ ಹೊಂದಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಭೂಸ್ಪರ್ಶ ಮಾಡಲಿದೆ. ವೈಮಾನಿಕ ಮತ್ತು ಸಮುದ್ರ ಆಧಾರಿತ ಯುದ್ಧಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಯುಎವಿ ಭವಿಷ್ಯದಲ್ಲಿ ಶತ್ರುಗಳ ರೇಡಾರ್‌ ಭೇದಿಸಿ, ಅವರ ನೆಲೆಗಳನ್ನು ಧ್ವಂಸಗೊಳಿಸಲು, ರಹಸ್ಯ ಕಾರ್ಯಾ ಚರಣೆ ನಡೆಸಲು ಉಪಯುಕ್ತವಾಗಿದೆ’ ಎಂದರು.

ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ–2025 ವೈಮಾನಿಕ ಪ್ರದರ್ಶನದಲ್ಲಿ ಸಮುದ್ರದ ಆಳದಲ್ಲಿ ಸಂಚರಿಸುವ ಡ್ರೋನ್‌ ಪ್ರದರ್ಶನಕ್ಕೆ ಇಟ್ಟಿರುವುದು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಸಮುದ್ರದಲ್ಲಿನ ಬಾಂಬ್‌ ಪತ್ತೆ ಹಚ್ಚುವ ಡ್ರೋನ್

ಸಮುದ್ರದ ಆಳದಲ್ಲಿ ಶತ್ರುಗಳು ಇರಿಸಿರುವ ಬಾಂಬ್‌ ಮತ್ತು ಲೋಹಗಳನ್ನು ಪತ್ತೆ ಹಚ್ಚುವ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸ್ವಯಂಚಾಲಿತವಾಗಿ ನೀರಿನಾಳದಲ್ಲಿ ಸಂಚರಿಸುವ ಡ್ರೋನ್‌ ಅನ್ನು ಸಿಐ4 ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೊ ಇಂಡಿಯಾ–2025’ ವೈಮಾನಿಕ ಪ್ರದರ್ಶನದಲ್ಲಿ ಕಂಪನಿಯು ಈ ಡ್ರೋನ್‌ ಪ್ರದರ್ಶಿಸಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ‘ಈ ಡ್ರೋನ್‌ ಸದ್ಯ ಭಾರತೀಯ ನೌಕಾ ಪಡೆಯಲ್ಲಿ ಬಳಕೆಯಾಗುತ್ತಿದೆ. ಇದರಲ್ಲಿ ಎಐ ಆಧಾರಿತ ಎರಡು ಕ್ಯಾಮೆರಾ ಐಆರ್‌ಕೆ ವಿದ್ಯುತ್‌ ದೀಪದ ವ್ಯವಸ್ಥೆಯನ್ನು ಒಳಗೊಂಡಿದೆ. ನೀರಿನಾಳದಲ್ಲಿರುವ ಪ್ರತಿಯೊಂದು ವಸ್ತುವಿನ ಸ್ಪಷ್ಟ ಚಿತ್ರಗಳನ್ನು ತೆಗೆದು ಶೇಖರಣೆ ಮಾಡಿಕೊಳ್ಳತ್ತದೆ. ಎಕೊ ಧ್ವನಿ ವ್ಯವಸ್ಥೆ ನೀರಿನಲ್ಲಿರುವ ಲೋಹಗಳು ಬಾಂಬ್‌ಗಳನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಒಳಗೊಂಡಿದೆ’ ಎಂದು ಕಂಪನಿಯ ಡೆನ್ಸಿಲ್‌ ಜಾರ್ಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ನೌಕಾ ಪಡೆಯ ಹಡಗುಗಳ ತಳಭಾಗಕ್ಕೆ ಆಗಿರುವ ಹಾನಿಯನ್ನು ನೋಡಲು ಮರೀನ್‌ ಕಮಾಂಡೋಸ್‌ ಸಮುದ್ರದ ಆಳಕ್ಕೆ ಈಜಿಕೊಂಡು ಹೋಗಬೇಕಾಗಿತ್ತು. ಆದರೆ ನಮ್ಮ ಡ್ರೋನ್‌ ಹಡಗಿಗೆ ಆಗಿರುವ ಹಾನಿಯನ್ನು ಪತ್ತೆ ಹೆಚ್ಚಿ ಮಾಹಿತಿಯನ್ನು ರವಾನಿಸಲಿದೆ. ಈ ಡ್ರೋನ್‌ ಅನ್ನು ಒಮ್ಮೆ ಚಾರ್ಜ್‌ ಮಾಡಿ ನೀರಿಗೆ ಇಳಿಸಿದರೆ ಕನಿಷ್ಠ ನಾಲ್ಕು ಗಂಟೆಗಳವರೆಗೂ ಕಾರ್ಯಾಚರಣೆ ನಡೆಸಲಿದೆ. ಸಮುದ್ರದಲ್ಲಿ ಕಾಣೆಯಾದವರನ್ನು ಹುಡುಕಾಟ ಮಾಡುತ್ತದೆ. ಈ ಡ್ರೋನ್‌ ಬೆಲೆ ₹1.5 ಕೋಟಿಯಿಂದ ₹4.5 ಕೋಟಿವರೆಗೂ ಇದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.