ADVERTISEMENT

ಮರಗಳಲ್ಲಿ ಜಾಹೀರಾತು ಫಲಕ: ತೆರವಿಗೆ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 20:10 IST
Last Updated 14 ಸೆಪ್ಟೆಂಬರ್ 2021, 20:10 IST
ಮರಗಳಲ್ಲಿ ಜಾಹೀರಾತುಗಳನ್ನು ಅಂಟಿಸಿರುವುದು
ಮರಗಳಲ್ಲಿ ಜಾಹೀರಾತುಗಳನ್ನು ಅಂಟಿಸಿರುವುದು   

ಬೆಂಗಳೂರು: ನಗರದಲ್ಲಿ ಮರಗಳಲ್ಲಿ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು ಸೂಚಿಸಿದ್ದಾರೆ. ಇದಕ್ಕೆ ಅವರು ಒಂದು ವಾರದ ಗಡುವು ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಮರಗಳಿಗೆ ವರ್ತಕರು, ಅಂಗಡಿಗಳ ಮಾಲೀಕರು, ಜಾಹೀರಾತುಗಳನ್ನು ಅಂಟಿಸುತ್ತಿದ್ದಾರೆ. ಜಾಹೀರಾತು ಸಂಸ್ಥೆಗಳು ಜಾಹೀರಾತು ಫಲಕಗಳನ್ನೂ ಮರಗಳಲ್ಲಿ ಅಳವಡಿಸುತ್ತಿವೆ. ಕೇಬಲ್ ಆಪರೇಟರ್‌ಗಳು ಕೇಬಲ್‌ಗಳನ್ನು ನೇತು ಹಾಕುತ್ತಿದ್ದಾರೆ. ಜಾಹೀರಾತು ಅಳವಡಿಸಲು ಮರಗಳಿಗೆ ಮೊಳೆಗಳು ಮತ್ತು ಪಿನ್‌ಗಳನ್ನು ಹೊಡೆಯುತ್ತಿದ್ದಾರೆ. ಕೆಲವರು ವಿದ್ಯುತ್ ದೀಪಗಳನ್ನು ಮರಗಳಿಗೆ ತೂಗುಹಾಕುತ್ತಿದ್ದಾರೆ. ಕಟ್ಟಡ ನಿರ್ಮಾಣ ಹಂತದಲ್ಲಿ ಮರಗಳಿಗೆ ಕಬ್ಬಿಣದ ರಾಡುಗಳನ್ನು ಹೊಡೆಯುತ್ತಿರುವುದೂ ಕೆಲವೆಡೆ ಕಂಡುಬಂದಿದೆ. ಇದರಿಂದ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘ಮರಗಳಿಗೆ ಈ ರೀತಿ ಹಾನಿ ಉಂಟು ಮಾಡುವುದು 1976ರ ಕರ್ನಾಟಕ ಮರ ಸಂರಕ್ಷಣಾ ಕಾಯ್ದೆಯ ಕಲಂ 8ರ ಪ್ರಕಾರ ಶಿಕ್ಷಾರ್ಹ ಅಪರಾಧ. ಮರಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಎಲ್ಲ ವಿಧವಾದ ಜಾಹೀರಾತು ಫಲಕಗಳು ಮತ್ತು ಇತರೆ ವಸ್ತುಗಳನ್ನು ಅಳವಡಿಸಿದವರೇ ತೆರವುಗೊಳಿಸಬೇಕು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಒಣಗಿರುವ ಮರಗಳು ಮತ್ತು ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕಿದೆ. ಈ ಕಾರ್ಯಕ್ಕೆ ನಾಗರಿಕರ ಸಹಕಾರವೂ ಅಗತ್ಯ. ಅಪಾಯಕಾರಿ ಸ್ಥಿತಿಯಲ್ಲಿರುವ ರೆಂಬೆ ಕೊಂಬೆಗಳ ಬಗ್ಗೆ ಸಾರ್ವಜನಿಕರು ಆಯಾ ವಲಯದ ಅರಣ್ಯಾಧಿಕಾರಿಗಳ ಗಮನಕ್ಕೆ ತರಬಹುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.