ADVERTISEMENT

‘ರಸ್ತೆ ಗುಂಡಿಗಳಿಗೆ ರಂಗೋಲಿ’ ಕಾರ್ಯಕ್ರಮ ಇಂದು

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:49 IST
Last Updated 28 ಜನವರಿ 2022, 19:49 IST

ಬೆಂಗಳೂರು: ‘ನಗರದ ರಸ್ತೆಗಳು ಗುಂಡಿಮಯವಾಗಿವೆ. ಇವುಗಳನ್ನು ದುರಸ್ತಿಗೊಳಿಸುವಂತೆ ಹಲವು ಪ್ರತಿಭಟನೆಗಳನ್ನು ಮಾಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಸರ್ಕಾರ ಹಾಗೂ ಬಿಬಿಎಂಪಿಯ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಇದೇ 29ರಂದುʻರಸ್ತೆ ಗುಂಡಿಗಳಿಗೆ ರಂಗೋಲಿʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ)ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ದರ್ಶನ್‌ ಜೈನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ‘ರಸ್ತೆ ಗುಂಡಿಗಳಿಗೆ ಸಂಬಂಧಿಸಿ ಹೈಕೋರ್ಟ್‌ ಪದೇ ಪದೇ ಬಿಬಿಎಂಪಿ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನ ರಸ್ತೆ ಗುಂಡಿಗಳಿಂದಾಗಿ ಮೃತರಾಗಿದ್ದಾರೆ. ಸಾಕಷ್ಟು ಅಪಘಾತಗಳು ಸಂಭವಿಸಿವೆ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ’ ಎಂದು ದೂರಿದರು.

‘ಒಟ್ಟು 482 ಕಿ.ಮೀ. ಉದ್ದದ ರಸ್ತೆಗಳಲ್ಲಿರುವ ಗುಂಡಿಗಳನ್ನು ಈವರೆಗೂ ಮುಚ್ಚಿಲ್ಲ ಎಂದು ಪಾಲಿಕೆಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಕಳಪೆ ಕಾಮಗಾರಿಯಿಂದಾಗಿ, ದುರಸ್ತಿಪಡಿಸಿದ ರಸ್ತೆಗಳಲ್ಲಿ ಮತ್ತೆ ಗುಂಡಿಗಳಾಗಿವೆ. ಹಾಕಲಾಗಿದ್ದ ತೇಪೆಯು ಒಂದೇ ಮಳೆಗೆ ಕಿತ್ತುಹೋಗಿದೆ. ಸಾವಿರಾರು ಕೋಟಿ ತೆರಿಗೆ ಹಣ ಜನಪ್ರತಿನಿಧಿಗಳ ಜೇಬು ಸೇರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.