ADVERTISEMENT

ಶಾಸಕ ರವಿಸುಬ್ರಹ್ಮಣ್ಯರಿಂದ ಆರೋಪಿಗಳ ರಕ್ಷಣೆ: ಎಎಪಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:35 IST
Last Updated 29 ಜೂನ್ 2021, 21:35 IST

ಬೆಂಗಳೂರು: ‘ವಸಿಷ್ಠ ಸಹಕಾರ ಸೊಸೈಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಬಸವನಗುಡಿಯ ಬಿಜೆಪಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ರಕ್ಷಣೆ ನೀಡುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್‌ ಖಾದ್ರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣದಲ್ಲಿ ಭಾಗಿಯಾಗಿದ್ದ ರವಿ ಸುಬ್ರಹ್ಮಣ್ಯ ಈಗ ಆರೋಪಿಗಳಿಗೆ ಆಸರೆಯಾಗಿ ನಿಂತಿದ್ದಾರೆ. ನಿವೃತ್ತಿಯ ನಂತರ ನೆಮ್ಮದಿಯ ಜೀವನ ನಡೆಸುವ ಸಲುವಾಗಿ ಅನೇಕರು ಪಿಂಚಣಿ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದರು. ಅವರ ಬದುಕು ಈಗ ಅಯೋಮಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ನೆಮ್ಮದಿಯಿಂದ ಇರಬೇಕಾದವರು ಈಗ ರಸ್ತೆಯಲ್ಲಿ ನಿಂತು ತಮ್ಮ ಹಣಕ್ಕಾಗಿಯೇ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಈ ಪ್ರಕರಣದ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಬಿಜೆಪಿಯ ಪ್ರಭಾವಿ ನಾಯಕರು ಆರೋಪಿಗಳ ಜೊತೆ ನಂಟು ಹೊಂದಿರುವ ಸಾಧ್ಯತೆ ಇದ್ದು ಈ ಬಗ್ಗೆಯೂ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ‘ವಸಿಷ್ಠ ಸಹಕಾರ ಸೊಸೈಟಿಯ ಪ್ರಮುಖ ನಿರ್ದೇಶಕ ಕೆ.ಎನ್.ವೇಂಕಟನಾರಾಯಣ, ಬಿಜೆಪಿ ನಾಯಕರ ಜೊತೆ ಒಡನಾಟ ಹೊಂದಿದ್ದಾರೆ. ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕರಿಗೆ ಆಪ್ತರಾಗಿದ್ದಾರೆ. ಅವರೆಲ್ಲರ ಶ್ರೀ ರಕ್ಷೆಯೂ ಅವರ ಮೇಲಿದೆ. ಹೀಗಿರುವಾಗ ಪಾರದರ್ಶಕ ತನಿಖೆ ನಡೆಯುವುದು ಅಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.