ADVERTISEMENT

ನೂತನ ಪಾರ್ಕಿಂಗ್ ನೀತಿಗೆ ಎಎಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:09 IST
Last Updated 24 ಸೆಪ್ಟೆಂಬರ್ 2022, 5:09 IST
ಆಮ್‌ ಆದ್ಮಿ ಪಕ್ಷ
ಆಮ್‌ ಆದ್ಮಿ ಪಕ್ಷ   

ಬೆಂಗಳೂರು: ವಾಹನ ಸವಾರರಿಗೆ ಗುಣಮಟ್ಟದ ರಸ್ತೆ ಕಲ್ಪಿಸಲು ಸಾಧ್ಯವಾಗದ ಬಿಜೆಪಿಯ ಶೇ 40 ಸರ್ಕಾರವು ಈಗ ನೂತನ ಪಾರ್ಕಿಂಗ್‌ ನೀತಿ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವುದು ಖಂಡನೀಯ ಎಂದು ಆಮ್‌ ಆದ್ಮಿ ಪಕ್ಷ ಪ್ರತಿಕ್ರಿಯಿಸಿದೆ.

‘ಸೆ.‌ 18ರಂದು (ಭಾನುವಾರ) ರಜೆ ದಿನದಂದು ಟೆಂಡರ್‌ಗೆ ಆಹ್ವಾನ ಕರೆದಿರುವುದು ಹಲವು ಅನು ಮಾನಗಳಿಗೆ ಕಾರಣವಾಗಿದೆ. ಕೆಟಿಪಿಪಿ ಕಾಯಿದೆ ಪ್ರಕಾರ ಟೆಂಡರ್‌ಗೆ 40 ದಿನ ಕಾಲಾವಕಾಶ ನೀಡಬೇಕಾಗಿದ್ದರೂ ಕೇವಲ 15 ದಿನ ಕಾಲಾವಕಾಶ ನೀಡಲಾಗಿದೆ. ಎಂಟು ವಲಯಗಳಲ್ಲೂ ಎಂಟು ಗುತ್ತಿಗೆದಾರರನ್ನು ಪೂರ್ವ ನಿಗದಿ ಮಾಡಿಕೊಳ್ಳಲಾಗಿದೆ. ನಾಮಕಾ ವಾಸ್ತೆ ಟೆಂಡರ್‌ ಕರೆಯಲಾಗಿದೆ’ ಎಂದು ಎಎಪಿ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.

‘ರಸ್ತೆ ಬದಿ ವಾಹನ ನಿಲ್ಲಿಸುವುದಕ್ಕೂ ಪ್ರಿಪೇಯ್ಡ್‌ ಶುಲ್ಕ ವಿಧಿಸುವ ನೂತನ ಪಾರ್ಕಿಂಗ್‌ ನೀತಿಯು ಸಾಮಾನ್ಯ ವಾಹನ ಸವಾರರಿಗೆ ಹೊರೆಯಾಗಲಿದೆ. ಪ್ರತಿ ಗಂಟೆಗೆ ₹ 15ರಿಂದ 30 ವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ’ ಎಂದರು.

ADVERTISEMENT

‘ಈ ನೂತನ ನೀತಿಯಲ್ಲಿ ಮನೆ ಎದುರು ಕಾರು ಪಾರ್ಕಿಂಗ್‌ ಮಾಡು ವುದಕ್ಕೂ ₹3000 ದಿಂದ ₹5000 ನೀಡಿ ಪರವಾನಗಿ ಪಡೆಯಬೇಕೆಂಬ ನಿಯಮ ರೂಪಿಸಲಾಗಿದೆ. ವಾಹನ ಸವಾರರಿಗೆ ನೆರವಾಗುವ ನೀತಿ ರೂಪಿಸುವ ಬದಲು ಲೂಟಿ ಮಾಡಲು ಸರ್ಕಾರ ಮುಂದಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.