ADVERTISEMENT

ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿ ಮೇಲೆ ಎಸಿಬಿ ದಾಳಿ 

ನಕಲಿ ಕಾರ್ಮಿಕರ ಹೆಸರಿನಲ್ಲಿ ₹550 ಕೋಟಿ ‘ಗುಳುಂ’?

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 20:00 IST
Last Updated 7 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೌರಕಾರ್ಮಿಕರ ಭವಿಷ್ಯ ನಿಧಿ, ಇಎಸ್‌ಐ ಬಾಬ್ತಿನ ₹ 384 ಕೋಟಿ ಹಾಗೂ ನಕಲಿ ಕಾರ್ಮಿಕರ ವೇತನದ ಹೆಸರಿನಲ್ಲಿ ₹ 550 ಕೋಟಿ ವಂಚಿಸಿರುವ ಪ್ರಕರಣದ ಸಂಬಂಧ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ಅಧಿಕಾರಿಗಳು ಗುರುವಾರ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಿಗ್ಗೆ ಕಚೇರಿ ತೆರೆಯುತ್ತಿದ್ದಂತೆ ವಿವಿಧ ತಂಡಗಳಲ್ಲಿ ಬಂದ ಅಧಿಕಾರಿಗಳ ತಂಡ ದಾಖಲೆಗಳನ್ನು ಜಾಲಾಡಿದೆ. ಈ ಸಂಬಂಧ ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷರು 2017ರ ಮಾರ್ಚ್‌ನಲ್ಲಿ ನೀಡಿದ್ದ ದೂರು ಆಧರಿಸಿ, ರಾಜ್ಯ ಸರ್ಕಾರ ಅದೇ ವರ್ಷದ ಅಕ್ಟೋಬರ್‌ 19ರಂದು ಎಸಿಬಿ ತನಿಖೆಗೆ ಆದೇಶಿಸಿತ್ತು.

ಪಾಲಿಕೆಯ ಏಳು ಜಂಟಿ ಕಮಿಷನರ್‌, ಏಳು ಅಧೀಕ್ಷಕ ಎಂಜಿನಿಯರ್‌, ಇಬ್ಬರು ಕಾರ್ಯಪಾಲಕ ಎಂಜಿನಿಯರ್‌, 26 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಸೇರಿ 46 ಅಧಿಕಾರಿಗಳಿಗೆ ಒಂಬತ್ತು ಸಲ ಎಸಿಬಿ ನೋಟಿಸ್‌ ನೀಡಿತ್ತು. ಈ ನೋಟಿಸ್‌ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ್ದರಿಂದ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಿಬಿಎಂಪಿಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರರು ಕನಿಷ್ಠ ವೇತನ ಪಾವತಿಸಿಲ್ಲ. ವೇತನದಲ್ಲಿ ‍ಪಿಎಫ್‌, ಇಎಸ್‌ಐ ಹಣ ಕಡಿತಗೊಳಿಸಿದ್ದರೂ ಅವರ ವೈಯಕ್ತಿಕ ಖಾತೆಗೆ ಜಮಾ ಮಾಡದೆ ಅಕ್ರಮ ಎಸಗಲಾಗಿದೆ. ಅಲ್ಲದೆ, 6,600 ನಕಲಿ ಕಾರ್ಮಿಕರ ಹೆಸರಿನಲ್ಲಿ ವೇತನ ಪಡೆಯಲಾಗುತ್ತಿದೆ. 19 ಸಾವಿರ ಕಾರ್ಮಿಕರ ವೇತನದ ಲೆಕ್ಕ ಇಡಲಾಗಿದ್ದರೂ ವಾಸ್ತವದಲ್ಲಿ 12,400 ಮಂದಿ ಮಾತ್ರ ದುಡಿಯುತ್ತಿದ್ದಾರೆ ಎನ್ನಲಾಗಿದೆ.

ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿಗೆ ಅವರ ವೇತನದ ಶೇ 12, ಮಾಲೀಕರ ಶೇ 13.61ರಷ್ಟು ಪಾಲು ಇರುತ್ತದೆ. ಇಎಸ್‌ಐಗೆ ಕಾರ್ಮಿಕರು ಶೇ 1.75ರಷ್ಟು, ಮಾಲೀಕರ ಶೇ 4.75ರಷ್ಟು ತುಂಬಬೇಕು. ಗುತ್ತಿಗೆದಾರರ ಪಾಲನ್ನು ಬಿಬಿಎಂಪಿ ಪಾವತಿಸುತ್ತಿದೆ. ಆದರೆ, 2005ರಿಂದ ₹ 384 ಕೋಟಿ ಕಟ್ಟದೆ ಅಕ್ರಮ ಎಸಗಲಾಗಿದೆ. ಇದಲ್ಲದೆ, 19 ವರ್ಷದಿಂದ 6,600 ನಕಲಿ ಕಾರ್ಮಿಕರ ವೇತನಕ್ಕೆ ₹ 550 ಕೋಟಿ ಎತ್ತುವಳಿ ಮಾಡಲಾಗಿದೆ. ಈ ಆರೋಪಗಳುಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಈ ಹಗರಣದಲ್ಲಿ ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ, ಗುತ್ತಿಗೆದಾರರ ಪಾತ್ರವೇನು, ವಾರ್ಡುವಾರು ತಿಂಗಳಲ್ಲಿ ಎಷ್ಟು ಜನ ಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ಪಾಲಿಕೆಯಲ್ಲಿ ನಡೆದಿರುವ
ದೊಡ್ಡ ಹಗರಣಗಳಲ್ಲೊಂದು ಎನ್ನಲಾಗಿದೆ.

‘ಬಯೊಮೆಟ್ರಿಕ್‌ ಅಳವಡಿಸಿಲ್ಲ’

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾವಿರಾರು ಪೌರ ಕಾರ್ಮಿಕರು ದುಡಿಯುತ್ತಿದ್ದರೂ ಬಯೊಮೆಟ್ರಿಕ್‌ ಅಳವಡಿಸದ ಬಗ್ಗೆ ಎಸಿಬಿ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.

ಸಾಫ್ಟ್‌ವೇರ್‌ ತಂತ್ರಜ್ಞಾನಕ್ಕೆ ಜಗತ್ತಿನಾದ್ಯಂತ ಬೆಂಗಳೂರು ಹೆಸರುವಾಸಿಯಾಗಿದೆ. ಆದರೆ, ಪಾಲಿಕೆಯಲ್ಲಿ ಕಾರ್ಮಿಕರ ಹಾಜರಾತಿ ದಾಖಲಿಸಲು ಈ ತಂತ್ರಜ್ಞಾನವನ್ನು ಏಕೆ ಅಳವಡಿಸಿಲ್ಲ ಎಂಬುದು ಮೂಲಗಳ ಪ್ರಶ್ನೆ.

ಬಯೊಮೆಟ್ರಿಕ್‌ ಅಳವಡಿಸಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಮೂಲಗಳು ವ್ಯಕ್ತಪಡಿಸಿವೆ.

ರಿಯಲ್‌ಎಸ್ಟೇಟ್‌: ಐ.ಟಿ ದಾಳಿ

ಆದಾಯ ತೆರಿಗೆ ಅಧಿಕಾರಿಗಳು ನಗರದ ಕೆಲವು ಪ್ರತಿಷ್ಠಿತ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬುಧವಾರದಿಂದ ಆರಂಭವಾಗಿರುವ ದಾಳಿ ಗುರುವಾರವೂ ಮುಂದುವರಿದಿದೆ. ವೈಟ್‌ಫೀಲ್ಡ್‌, ಅವಲಹಳ್ಳಿ, ಬೊಮ್ಮನಹಳ್ಳಿ ಒಳಗೊಂಡಂತೆ 15ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಉದ್ಯಮಿಗಳ ಆ‍ಪ್ತರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.