ADVERTISEMENT

ಅಕ್ರಮ ಆಸ್ತಿ ಆರೋಪ: ಜಂಟಿ ಆಯುಕ್ತರ ಮನೆ ಮೇಲೆ ದಾಳಿ

ನಾಲ್ವರು ಅಧಿಕಾರಿಗಳ ಆಸ್ತಿ ತನಿಖೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
   

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ವಾಣಿಜ್ಯ ಇಲಾಖೆ ಜಂಟಿ ಆಯುಕ್ತ ಎಂ.ಬಿ. ನಾರಾಯಣ ಸ್ವಾಮಿ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಶುಕ್ರವಾರ ಬೆಳಗಿನ ಜಾವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳುದಾಳಿ ನಡೆಸಿ ಭಾರಿ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.

ಬೆಂಗಳೂರು ಶಾಂತಿನಗರದ ವಿಭಾಗೀಯ ಸರಕು ಹಾಗೂ ಸೇವಾ ತೆರಿಗೆ ಮನವಿಗಳು– 5ರ ಜಂಟಿ ಆಯುಕ್ತರಾಗಿ ನಾರಾಯಣ
ಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಬಮೂಲ್‌ (ಬೆಂಗಳೂರು ಹಾಲು ಒಕ್ಕೂಟ) ರಾಮನಗರ ಜಿಲ್ಲೆ ವ್ಯವಸ್ಥಾಪಕ ಡಾ. ಶಿವಶಂಕರ್‌, ಪಂಚಾಯತ್‌ ರಾಜ್‌ ಇಲಾಖೆ ಪಿರಿಯಾಪಟ್ಟಣ ಸಹಾಯಕ ಎಂಜಿನಿಯರ್‌ ಅರ್ಷದ್‌ ‍‍ಪಾಷಾ ಮತ್ತು ಪಿಡಬ್ಲ್ಯುಡಿ ಇಲಾಖೆ ಹಾಸನದ ಸಹಾಯಕ ಎಂಜಿನಿಯರ್‌ ಎಚ್‌.ಎಸ್‌. ಚನ್ನೇಗೌಡ ಅವರ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ.

ಎಲ್ಲೆಲ್ಲಿ ಶೋಧ: ನಾರಾಯಣ ಸ್ವಾಮಿ ಅವರ ಬೆಂಗಳೂರು ಜಯನಗರದಲ್ಲಿರುವ ವಾಸದ ಮನೆ, ಸಂಬಂಧಿಕರಿಗೆ ಸೇರಿದ ವಿನಾಯಕ ನಗರ ಮೇಡನಹಳ್ಳಿಯ ಮನೆ, ಕೋಲಾರದ ಎರಡು ಮನೆಗಳು, ಚಿಂತಾಮಣಿ ತಾಲ್ಲೂಕಿನಲ್ಲಿರುವ ಮನೆ ಮತ್ತು ಶಾಂತಿನಗರದಲ್ಲಿರುವ ಕಚೇರಿ; ಶಿವಶಂಕರ್‌ ಅವರ ರಾಮನಗರ ಅರ್ಕಾವತಿ ಬಡಾವಣೆ ನಿವಾಸ, ಸಂಬಂಧಿಕರಿಗೆ ಸೇರಿದ ದೊಡ್ಡಬಳ್ಳಾಪುರದ ಮನೆ, ರಾಮನಗರದ ಬಮೂಲ್‌ ಕಚೇರಿ; ಅರ್ಷದ್‌ ಪಾಷಾ ಅವರಿಗೆ ಸೇರಿದ ಮೈಸೂರು ಉದಯಗಿರಿಯಲ್ಲಿರುವ ಮನೆ, ಪಂಚಾಯತ್‌ ರಾಜ್‌ ಇಲಾಖೆ ಕಚೇರಿ, ಪಿರಿಯಾಪಟ್ಟಣ; ಚನ್ನೇಗೌಡರ ಅವರಿಗೆ ಸೇರಿರುವ ಹೇಮಾವತಿ ನಗರದ (ಹಾಸನ) ಮನೆ, ಹಾಸನದ ಸಂಬಂಧಿಕರ ಮನೆ ಮತ್ತು ಹಾಸನ ಪಿಡಬ್ಲ್ಯುಡಿ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ.

ADVERTISEMENT

ದಾಳಿ ವೇಳೆ ಮನೆ, ನಿವೇಶನ, ಜಮೀನು, ಹಣ– ಆಭರಣ ಹಾಗೂ ವಾಹನಗಳು ಪತ್ತೆಯಾಗಿವೆ. ಅನೇಕ ಮಹತ್ವದ ದಾಖಲೆಗಳು ಸಿಕ್ಕಿದ್ದು ಪರಿಶೀಲನೆ ನಡೆಯುತ್ತಿದೆ. ಎಸಿಬಿ ಐಜಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ದಕ್ಷಿಣ ವಲಯದ ಎಸಿಬಿ ಎಸ್‌ಪಿ ರಶ್ಮಿನೇತೃತ್ವದಲ್ಲಿನಡೆದ ದಾಳಿಯಲ್ಲಿ ಅನೇಕ ತಂಡಗಳಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಾಂಶಗಳು

* ಪಾಷಾ ಬಳಿ ₹ 2 ಕೋಟಿ ಮೌಲ್ಯದ ಆಸ್ತಿ ಪತ್ತೆ

* ಶಿವಶಂಕರ್ ಬಳಿ 1 ಮನೆ, 4 ನಿವೇಶನ, 500 ಗ್ರಾಂ ಬಂಗಾರ, ₹ 35 ಲಕ್ಷ ನಗದು

* ನಾರಾಯಣಸ್ವಾಮಿ, ಚನ್ನೇಗೌಡರ ಆಸ್ತಿಪಾಸ್ತಿ ಲೆಕ್ಕಾಚಾರ ಮಾಡುತ್ತಿರುವ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.