ADVERTISEMENT

ವಿಭಜಕಕ್ಕೆ ಬೈಕ್ ಡಿಕ್ಕಿ: ಮೂವರು ಟೆಕಿಗಳ ದುರ್ಮರಣ

ಎಚ್‌ಎಎಲ್‌, ಕೆಆರ್‌ಡಿಎಲ್‌ನಲ್ಲಿ ಎಂಜಿನಿಯರ್ ಆಗಿದ್ದರು

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:45 IST
Last Updated 6 ಮೇ 2019, 19:45 IST
ಅನಿಲ್
ಅನಿಲ್   

ಬೆಂಗಳೂರು: ಬಸವೇಶ್ವರ ನಗರದಲ್ಲಿ ಸೋಮವಾರ ತಡರಾತ್ರಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಟೆಕಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಕುಣಿಗಲ್‌ನ ಅನಿಲ್, ತಿ.ನರಸೀಪುರದ ಕಾರ್ತಿಕ್, ಚಿಕ್ಕಬಳ್ಳಾಪುರದ ಶ್ರೀನಾಥ್ ಮೃತರು. ಬಸವೇಶ್ವರ ನಗರದ ಹೋಟೆಲೊಂದರಲ್ಲಿ ಊಟ ಮುಗಿಸಿಕೊಂಡು ರಾತ್ರಿ 12.30ರ ಸುಮಾರಿಗೆ ಬೈಕ್‌ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

‘ಮೂವರು ಒಂದೇ ಬೈಕ್‌ನಲ್ಲಿದ್ದರು. ಯಾರೊಬ್ಬರೂ ಹೆಲ್ಮೆಟ್ ಹಾಕಿರಲಿಲ್ಲ. ಕಾರ್ತಿಕ್ ಬೈಕ್ ಓಡಿಸುತ್ತಿದ್ದರು. ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ ಬಳಿಯ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ ಹೊಡೆದು ಮೇಲಕ್ಕೆ ಹಾರಿ ಬಿದ್ದಿತ್ತು. ಅದರ ಜೊತೆಗೆಯೇ ಮೂವರು ರಸ್ತೆಯಲ್ಲಿ ಹಾರಿ ಬಿದ್ದಿದ್ದರು’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಮೂವರ ತಲೆಗೂ ತೀವ್ರ ಪೆಟ್ಟು ಬಿದ್ದು, ರಕ್ತ ಸೋರುತ್ತಿತ್ತು. ಸ್ಥಳೀಯರು ಆಸ್ಪತ್ರೆಗೆ ಸೇರಿಸಬೇಕು ಎನ್ನುವಷ್ಟರಲ್ಲೇ ತೀವ್ರರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೃತರೆಲ್ಲರೂ ಎಂಜಿನಿಯರ್: ‘ಅಪಘಾತದಲ್ಲಿ ಮೃತಪಟ್ಟ ಮೂವರೂ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿ (ಕೆಆರ್‌ಡಿಎಲ್‌), ಅನಿಲ್, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ನಾಸಿಕ್ ಕಚೇರಿಯಲ್ಲಿ ಹಾಗೂ ಶ್ರೀನಾಥ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪೋಷಕರು, ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಹೀಗಾಗಿ, ಮೃತರ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಲು ಸಾಧ್ಯವಾಗಿಲ್ಲ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದರು.

‘ಮಾಗಡಿ ರಸ್ತೆಯಿಂದ ಬಸವೇಶ್ವರ ನಗರದ ಮೂಲಕ ಶಂಕರಮಠದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆ ರಸ್ತೆಯಲ್ಲಿ ಸೋಮವಾರ ತಡರಾತ್ರಿ ವಾಹನಗಳ ಸಂಚಾರ ಕಡಿಮೆ ಇತ್ತು. ಅದೇ ಕಾರಣಕ್ಕೆ ಕಾರ್ತಿಕ್, ವೇಗವಾಗಿ ಬೈಕ್‌ ಚಲಾಯಿಸಿರಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.