ಬೆಂಗಳೂರು: ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ (24) ಮೃತಪಟ್ಟಿದ್ದಾರೆ.
‘ನಗರದ ಕಂಪನಿಯೊಂದರಲ್ಲಿ ತೇಜಸ್ ಕೆಲಸ ಮಾಡುತ್ತಿದ್ದರು. ಮನೆಯಿಂದಲೇ ಕೆಲಸ ಮಾಡಲು ಅವಕಾಶವಿತ್ತು. ಶುಕ್ರವಾರ ಸ್ನೇಹಿತನ ಕೊಠಡಿಯಲ್ಲಿ ಉಳಿದುಕೊಂಡು ರಾತ್ರಿಯವರೆಗೂ ಕಚೇರಿ ಕೆಲಸ ಮಾಡಿದ್ದರು. ಬಳಿಕ, ರಾತ್ರಿ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಪದ್ಮನಾಭನಗರದ ಪುಟ್ಟಲಿಂಗಯ್ಯ ಜಂಕ್ಷನ್ ಬಳಿ ತೇಜಸ್ ಬೈಕ್‌ನಲ್ಲಿ ಹೊರಟಿದ್ದರು. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಟಾಟಾ ಇಂಡಿಕಾ ಕಾರು ಚಾಲಕ, ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದ. ಇದರಿಂದಾಗಿ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ತೇಜಸ್ ಮೃತಪಟ್ಟಿದ್ದಾರೆ.’
‘ಅಪಘಾತಕ್ಕೆ ಕಾರಣವಾದ ಆರೋಪದಡಿ ಇಂಡಿಕಾ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಜಪ್ತಿ ಮಾಡಿ ಆತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.