ಯಲಹಂಕ: ರಾಜಾನುಕುಂಟೆಯ ರಕ್ಷಾ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಿಂದ ಕಟ್ಟಡದ ನೆಲಮಹಡಿಯಲ್ಲಿ ಕೆಲವು ಸಾಮಗ್ರಿಗಳು ಸುಟ್ಟು ಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಜಾನುಕುಂಟೆ–ಕಾಕೋಳು ರಸ್ತೆಯಲ್ಲಿರುವ ಈ ಆಸ್ಪತ್ರೆಯು ನೆಲಮಹಡಿ ಸೇರಿ ಐದು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ನೆಲಮಹಡಿಯಲ್ಲಿ ಬೆಳಿಗ್ಗೆ 9ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಔಷಧ ಅಂಗಡಿ, ಲ್ಯಾಬ್ ಮತ್ತು ಓಪಿಡಿ ವಿಭಾಗಗಳಿದ್ದು, ಜನರೇಟರ್ ಮತ್ತು ಕೆಲವು ವೈದ್ಯಕೀಯ ಉಪಕರಣಗಳು ಇರುವ ಸ್ಥಳವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಕೆಲವು ವೈದ್ಯಕೀಯ ಉಪಕರಣಗಳು ಸುಟ್ಟು ಕರಕಲಾದವು.
ಕಟ್ಟಡದ ಮೂರನೇ ಅಂತಸ್ತಿನ ತೀವ್ರನಿಗಾ ಘಟಕದಲ್ಲಿ ದಾಖಲಾಗಿದ್ದ ಮೂವರು ಸೇರಿದಂತೆ ಒಟ್ಟು 14 ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಿಸಿ, ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರು. ಇದೇ ಅಂತಸ್ತಿನಲ್ಲಿ ಪ್ಯಾರಾ ಮೆಡಿಕಲ್ ತರಬೇತಿ ವಿದ್ಯಾರ್ಥಿಗಳೂ ಇದ್ದರು. ಆಸ್ಪತ್ರೆಯಲ್ಲಿ ಒಟ್ಟು 40 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು.
ಬೆಂಕಿಯ ಅವಘಡದಿಂದ ಕಟ್ಟಡದ ಮೂರು ಅಂತಸ್ತುಗಳಲ್ಲಿಯೂ ದಟ್ಟವಾದ ಹೊಗೆ ಆವರಿಸಿಕೊಂಡಿತು. 6 ಅಗ್ನಿಶಾಮಕ ದಳಗಳು 2 ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ನಂದಿಸಿದರು.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್.ಪಿ. ನಾಗರಾಜ್, ಶಾಸಕ ಎಸ್.ಆರ್. ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ಬು, ತನಿಖೆಯ ನಂತರ ಬೆಂಕಿದುರಂತಕ್ಕೆ ನಿಖರ ಕಾರಣ ತಿಳಿಯಲಿದೆ.
ಕೃಷ್ಣಪ್ಪ ಎಂಬುವರು ಈ ಕಟ್ಟಡದ ಮಾಲೀಕರಾಗಿದ್ದು, ಡಾ.ಕಾಂತಿಕಿರಣ್, ಈ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.