ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವುದರಲ್ಲಿ ಶತಕ ಬಾರಿಸಿದ್ದ ಅಂತರ ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಕೆ.ಆರ್. ಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗೋವರ್ಧನಗಿರಿಯ ಡಿ.ಪ್ರಸಾದ್ ಬಾಬು ಅಲಿಯಾಸ್ ಪ್ರಸಾದ್ (32) ಬಂಧಿತ. ಆರೋಪಿಯಿಂದ ವಿವಿಧ ಕಂಪನಿಯ 100 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹1.45 ಕೋಟಿ ಎಂದು ಅಂದಾಜಿಸಲಾಗಿದೆ.
‘ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯದ ವಿವಿಧ ನಗರಗಳಲ್ಲಿ ಆರೋಪಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿ ಲೇಔಟ್‌ನ ನಾಲ್ಕನೇ ಕ್ರಾಸ್‌ನ ನಿವಾಸಿಯೊಬ್ಬರು ಮನೆಯ ಎದುರು ನಿಲುಗಡೆ ಮಾಡಿದ್ದ ಪಲ್ಸರ್ ಬೈಕ್ ಅನ್ನು ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ಬೈಕ್ ಮಾಲೀಕರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೊಸಕೋಟೆ ಟೋಲ್ ಬಳಿ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.
‘ಕದ್ದಿದ್ದ ದ್ವಿಚಕ್ರ ವಾಹನಗಳನ್ನು ಆಂಧ್ರಪ್ರದೇಶದ ಚಿತ್ತೂರಿನ ಬಂಗಾರುಪಾಳ್ಯಂನಲ್ಲಿ ಮಾರಾಟ ಮಾಡಿದ್ದ. ಆರೋಪಿ ಮಾರಾಟ ಮಾಡಿದ್ದ 16 ರಾಯಲ್ ಎನ್‌ಫೀಲ್ಡ್, 23 ಬಜಾಜ್ ಪಲ್ಸರ್, 36 ಸುಜುಕಿ ಆಕ್ಸೆಸ್, 6 ಹೀರೊ ಸ್ಪ್ಲೆಂಡರ್ ಪ್ಲಸ್, ಒಂದು ಬಜಾಜ್ ಸಿಟಿ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಆರೋಪಿಯ ಬಂಧನದಿಂದ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 21, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು, ಆವಲಹಳ್ಳಿಯಲ್ಲಿ ಠಾಣೆ ಹಾಗೂ ಕೋಲಾರ ಟೌನ್ ಪೊಲೀಸ್ ಠಾಣೆಯಲ್ಲಿ ಒಂದು, ಆಂಧ್ರಪ್ರದೇಶದ ತಿರುಪತಿ ವೆಸ್ಟ್ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ತಿರುಪತಿ ಈಸ್ಟ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳೂ ಸೇರಿದಂತೆ ಒಟ್ಟು 48 ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.