ಬೆಂಗಳೂರು: ‘ಪ್ರಚಾರನಿರತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ನೀಡಿದ್ದ ದೂರಿನಂತೆ ನಗರದ ಎಸಿಪಿ ಹಾಗೂ ಮೂವರು ಇನ್‌ಸ್ಪೆಕ್ಟರ್‌ಗಳನ್ನು ಮಂಗಳವಾರ ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ ಮುಖಂಡರು, ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಚುನಾವಣಾ ಆಯೋಗ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಸೂಚನೆ ನೀಡಿತ್ತು.
ಅದರಂತೆ ಡಿಜಿಪಿ ಅವರು ಮಂಗಳವಾರ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
‘ಯಶವಂತಪುರ ಉಪವಿಭಾಗದ ಎಸಿಪಿ ಪಿ.ರವಿಪ್ರಸಾದ್ ಅವರನ್ನು ಸಿಐಡಿಗೆ ವರ್ಗ ಮಾಡಲಾಗಿದೆ. ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ವಿ.ಶಿವರೆಡ್ಡಿ, ಪೀಣ್ಯದ ವಿ.ಟಿ.ಶ್ರೀನಿವಾಸ್ ಹಾಗೂ ಯಶವಂತಪುರದ ವೈ. ಮುದ್ದುರಾಜ್ ಅವರನ್ನು ಸಹ ವರ್ಗಾಯಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.