ADVERTISEMENT

ಆರ್ಯ ವೈಶ್ಯ ಅಭಿವೃದ್ಧಿಗೆ ₹10 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 15:32 IST
Last Updated 5 ಆಗಸ್ಟ್ 2023, 15:32 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ನಾಲ್ಕು ಯೋಜನೆಗಳ ಅಡಿಯಲ್ಲಿ ₹10 ಕೋಟಿ ವೆಚ್ಚ ಮಾಡುವ ಕ್ರಿಯಾಯೋಜನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಆರ್ಯ ವೈಶ್ಯ ಸಮುದಾಯದ 500 ಮಂದಿಗೆ ಸ್ವಯಂ ಉದ್ಯೋಗ ಯೋಜನೆಯಡಿ ವ್ಯಾಪಾರ ಚಟುವಟಿಕೆ ಕೈಗೊಳ್ಳಲು ಶೇಕಡ 4ರ ಬಡ್ಡಿ ದರದಲ್ಲಿ ತಲಾ ₹1 ಲಕ್ಷ ಸಾಲ ಮತ್ತು ಸಹಾಯಧನ ನೀಡುವುದು, ಆರ್ಯ ವೈಶ್ಯ ಆಹಾರ ವಾಹಿನಿ ಆರಂಭಿಸಲು ಬ್ಯಾಂಕ್‌ನಿಂದ ಸಾಲ ಪಡೆದ 40 ಮಂದಿಗೆ ತಲಾ ₹2 ಲಕ್ಷ ಸಹಾಯಧನ ಒದಗಿಸುವ ಕಾರ್ಯಕ್ರಮಗಳಿಗೆ ಒಪ್ಪಿಗೆ ದೊರೆತಿದೆ.

‘ವಾಸವಿ ಜಲಶಕ್ತಿ ಯೋಜನೆ’ ಅಡಿಯಲ್ಲಿ ಸಮುದಾಯದ 40 ಮಂದಿ ಸಣ್ಣ ರೈತರಿಗೆ ಕೊಳವೆ ಬಾವಿ ಮತ್ತು ಪಂಪ್‌ಸೆಟ್‌ ಅಳವಡಿಸಲು ₹2 ಲಕ್ಷ ಸಾಲ ಹಾಗೂ ₹50,000 ಸಹಾಯಧನ ನೀಡುವ ಯೋಜನೆ ಇದೆ. ‘ಅರಿವು ಶೈಕ್ಷಣಿಕ ಸಾಲ ಯೋಜನೆ’ ಅಡಿಯಲ್ಲಿ ಸಿಇಟಿ ಹಾಗೂ ನೀಟ್‌ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ 50 ವಿದ್ಯಾರ್ಥಿಗಳಿಗೆ ಶೇ 2ರ ಬಡ್ಡಿ ದರದಲ್ಲಿ ₹1 ಲಕ್ಷ ಸಾಲ ನೀಡುವ ಯೋಜನೆಗೂ ಅನುಮೋದನೆ ನೀಡಲಾಯಿತು.

ADVERTISEMENT

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ.ಕೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್.ಡಿ.ಗೌಡ, ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ಎಚ್.ಎ ಶೋಭಾ, ಕಂದಾಯ ಇಲಾಖೆ ಉಪ ಕಾರ್ಯದರ್ಶಿಎಸ್.ಎನ್ ಕಲಾವತಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.