ADVERTISEMENT

ಎಲೆ ಮಲ್ಲಪ್ಪ ಶೆಟ್ಟಿ ಕೆರೆ ರಕ್ಷಣೆಗೆ ಕ್ರಮ

ಕಲುಷಿತಗೊಳ್ಳಲು ಕಾರಣರಾದವರ ಗುರುತಿಸಿ ನೋಟಿಸ್‌: ಎನ್‌ಜಿಟಿಗೆ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 20:11 IST
Last Updated 16 ಜನವರಿ 2022, 20:11 IST
ಎಲೆ ಮಲ್ಲಪ್ಪ ಶೆಟ್ಟಿ ಕೆರೆ (ಸಂಗ್ರಹ ಚಿತ್ರ)
ಎಲೆ ಮಲ್ಲಪ್ಪ ಶೆಟ್ಟಿ ಕೆರೆ (ಸಂಗ್ರಹ ಚಿತ್ರ)   

ನವದೆಹಲಿ: ಬೆಂಗಳೂರು– ಹೊಸಕೋಟೆ ರಸ್ತೆಯಲ್ಲಿ, ಆವಲಹಳ್ಳಿ ಗ್ರಾಮದಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಕಲುಷಿತಗೊಳಿಸುತ್ತಿವುದರ ವಿರುದ್ಧ ಕ್ರಮಜರುಗಿಸಲಾಗುವುದು, ಇದಕ್ಕೆ ಕಾರಣರಾಗುವವರ ಪತ್ತೆ ಹಚ್ಚಿ ನೋಟಿಸ್ ಜಾರಿ
ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.

ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿರುವ ಕೆಎಸ್‌ಪಿಸಿಬಿಯು, ಕೆರೆಯ ಆಸುಪಾಸಿನಲ್ಲಿರುವ ಸುಮಾರು 110 ಗ್ರಾಮಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆ
ಗಳಿಂದ ಕಲುಷಿತ, ಒಳಚರಂಡಿ ನೀರು ಕೆರೆಯಂಗಳವನ್ನು ಸೇರುತ್ತಿರುವುದೇ ಕೆರೆಯು ಕಲುಷಿತಗೊಳ್ಳಲು ಕಾರಣ ಎಂದು ತಿಳಿಸಿದೆ.

ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಕಲುಷಿತಗೊಳಿಸುವವರ ವಿರುದ್ಧ ಕ್ರಮಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎನ್‌ಜಿಟಿ ತೆಗೆದುಕೊಂಡಿದೆ. ಎನ್‌ಜಿಟಿಯು ಈ ಹಿಂದೆ, ಕೆರೆಯ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳನ್ನು ಕುರಿತು ಯೋಜನಾವರದಿ ಸಲ್ಲಿಸಬೇಕು ಎಂದು ಕೆಎಸ್‌ಪಿಸಿಬಿಗೆ ಸೂಚನೆ ನೀಡಿತ್ತು.

ADVERTISEMENT

ಕೆರೆ ಆಸುಪಾಸಿನಲ್ಲಿರುವ ಸುಮಾರು 110 ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಮತ್ತು ಕಲುಷಿತ ನೀರು ಸಂಸ್ಕರಣಾ ಘಟಕ ಸ್ಥಾಪಿಸುವ ಕಾಮಗಾರಿಯು 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್ಎಸ್‌ಬಿ) ತಿಳಿಸಿದೆ ಎಂದು ಕೆಎಸ್‌ಪಿಸಿಬಿ ಮಾಹಿತಿ ನೀಡಿದೆ.

ಕೆರೆ ಕಲುಷಿತವಾಗುವುದನ್ನು ತಡೆಯಲು ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಪಾವಧಿ ಕಾಮಗಾರಿಗಳ ಜಾರಿge 2022ರ ಡಿಸೆಂಬರ್‌ವರೆಗೂ ಬಿಡಬ್ಲ್ಯೂಎಸ್‌ಎಸ್‌ಬಿ ಸಮಯ ಕೋರಿದೆ. ಅಲ್ಲದೆ, ದೀರ್ಘಾವಧಿಯ ಕಾಮಗಾರಿಗಳನ್ನು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೆಎಸ್‌ಪಿಸಿಬಿ ತಿಳಿಸಿದೆ.

ಕೆರೆಯ ಬಫರ್‌ ಝೋನ್‌ ವಲಯದಲ್ಲಿ ಅತಿಕ್ರಮಣವನ್ನು ತಡೆಯಲು ಬಿಬಿಎಂಪಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ವಿವರ ಕೇಳಿದ್ದು, ಅದನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ಮಂಡಳಿಯು ಎನ್‌ಜಿಟಿಗೆ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.