ಬೆಂಗಳೂರು: ‘ಬಾಕಿ ಉಳಿದಿರುವ 3,000 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವ್ಯಾಪಾರಕ್ಕಾಗಿ ಅಲೆದಾಡುತ್ತಿದ್ದ ಬಂಜಾರ ಸಮುದಾಯವನ್ನು ತಾಂಡಾಗಳಲ್ಲಿ ಒಂದೆಡೆ ನೆಲೆವೂರುವಂತೆ ಸಂತ ಸೇವಾಲಾಲ್ ಮಾಡಿದರು. ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಾನು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ವಾಸಿಸುವವನೇ ಮನೆಯೊಡೆಯ ಕಾನೂನು ತರಲಾಯಿತು. ಆದರೂ ಬಹಳಷ್ಟು ತಾಂಡಾಗಳು ಇನ್ನೂ ಕಂದಾಯ ಗ್ರಾಮಗಳಾಗಿಲ್ಲ’ ಎಂದರು.
‘ಸರ್ಕಾರದಿಂದಲೇ ಸೇವಾಲಾಲ್ ಜಯಂತಿ ಆಚರಿಸಲು ತೀರ್ಮಾನ ಕೈಗೊಂಡಿದ್ದೆ. ಅವರ ಜನ್ಮ ಸ್ಥಳವಾದ ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ₹60 ಕೋಟಿ, ತಾಂಡಾ ಅಭಿವೃದ್ಧಿ ನಿಗಮಕ್ಕೆ ₹400 ಕೋಟಿ ಅನುದಾನ ಒದಗಿಸಿದ್ದೆ. ಸೂರಗೊಂಡನಕೊಪ್ಪದಲ್ಲಿ ವಸತಿನಿಲಯ ನಿರ್ಮಿಸಲು ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಎಲ್ಲರೂ ಸ್ವಾಭಿಮಾನಿಗಳಾಗಬೇಕು. ಶೋಷಣೆಯಿಂದ ತಪ್ಪಿಸಿಕೊಳ್ಳಬೇಕು. ಬಡತನ, ನಿರುದ್ಯೋಗ ನಿವಾರಣೆಯಾಗಬೇಕು ಮೇಲ್ವರ್ಗ, ಕೆಳವರ್ಗ ಎಂಬ ಭೇದ ಹೋಗಬೇಕಾದರೆ ಶಿಕ್ಷಣ ಬೇಕೇ ಬೇಕು ಎಂದು ಪ್ರತಿಪಾದಿಸಿದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗತಜ್ಞ ಎ.ಆರ್. ಗೋವಿಂದಸ್ವಾಮಿ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ , ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಮತ್ತು ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.