ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (40) ಅವರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಸಿದೆ.
ವಿನಯ್ ಸಾವಿಗೆ ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಅವರ ಬೆಂಬಲಿಗ ಮುಖಂಡರೊಬ್ಬರು ಕಾರಣ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಆತ್ಮಹತ್ಯೆ ಸಂಬಂಧ, ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ಎಂಬುವವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿನಯ್ ಆತ್ಮಹತ್ಯೆಗೂ ಮುನ್ನ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅದರ ಆಧಾರದಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ.
ಆತ್ಮಹತ್ಯೆಯ ವಿಷಯ ಶುಕ್ರವಾರ ಬೆಳಿಗ್ಗೆ ಗೊತ್ತಾಗುತ್ತಿದ್ದಂತೆಯೇ ಕೊಡಗು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಹೋರಾಟದ ಹಾದಿ ಹಿಡಿದರು. ಮೃತ ಶರೀರ ಇಡಲಾಗಿದ್ದ ಡಾ. ಅಂಬೇಡ್ಕರ್ ಆಸ್ಪತ್ರೆಗೆ ಧಾವಿಸಿದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಮತ್ತು ಇತರ ನಾಯಕರು, ಕಾಂಗ್ರೆಸ್ ನಾಯಕರ ಬೆದರಿಕೆಯಿಂದ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ರಾಜಕೀಯ ದ್ವೇಷದ ಹತ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅತ್ತ ಕೊಡಗಿನಲ್ಲಿ ಕೂಡ ಬಿಜೆಪಿ ನಾಯಕರು–ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕೂಡ ತನ್ನ ಶಾಸಕರ ಪರ ನಿಂತಿದ್ದು, ಆತ್ಮಹತ್ಯೆಯು ರಾಜಕೀಯ ಕದನವಾಗಿ ಮಾರ್ಪಾಟಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ವಿನಯ್ ಅವರು ಪತ್ನಿ ಹಾಗೂ ಪುತ್ರಿಯ ಜತೆಗೆ ನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ನೆಲಸಿದ್ದರು. ನಗರದ ಕಂಪನಿಯೊಂದರಲ್ಲಿ ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ‘ಕೊಡಗಿನ ಸಮಸ್ಯೆಗಳು ಮತ್ತು ಪರಿಹಾರ’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಆಗಿದ್ದರು. ಅದರಲ್ಲಿ ಪೋಸ್ಟ್ ಮಾಡಲಾದ ಸಂದೇಶವೊಂದರ ಸಂಬಂಧ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ನಾಗವಾರದ ಕಂಪನಿಯ ಗೋದಾಮಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತದೇಹ ಇರಿಸಿದ್ದ ಅಂಬೇಡ್ಕರ್ ಆಸ್ಪತ್ರೆಯ ಎದುರು ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪೊನ್ನಣ್ಣ, ಮಂಥರ್‌ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾ ಅಧ್ಯಕ್ಷ ತನ್ನೀರಾ ಮೈನಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಕೊಡಗು ಜಿಲ್ಲೆಯಿಂದ ಬಂದಿದ್ದ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡರು ಸೇರಿ ಪ್ರತಿಭಟನೆ ನಡೆಸಿದರು.
ಪೊನ್ನಣ್ಣ, ಮಂಥರ್‌ಗೌಡ, ತನ್ನೀರಾ ಮೈನಾ ಅವರ ಕಿರುಕುಳ ಹಾಗೂ ಬೆದರಿಕೆಯಿಂದ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಅವರ ಸಹೋದರ ಕೆ.ಎಸ್.ಜೀವನ್ ಅವರು ಹೆಣ್ಣೂರು ಠಾಣೆಗೆ ಶುಕ್ರವಾರ ಮಧ್ಯಾಹ್ನ ದೂರು ನೀಡಿದರು. ತನ್ನೀರಾ ಮೈನಾ ಮತ್ತು ಇತರರ ವಿರುದ್ಧ ಹೆಣ್ಣೂರು ಪೊಲೀಸರು ಎಫ್‌ಐಆರ್ ದಾಖಲಿಸಿದರು. ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸದೇ ಇರುವುದು ಪೊಲೀಸರ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ ಹೆಚ್ಚುವಂತೆ ಮಾಡಿತು. ‘ಸರ್ಕಾರ ಹೇಳಿದಂತೆ ಕೇಳುತ್ತಿದ್ದೀರಾ’ ಎಂದು ಪೊಲೀಸರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ವಿನಯ್ ಅವರ ಮರಣ ಪತ್ರದಲ್ಲಿ ಶಾಸಕರಿಬ್ಬರ ಹೆಸರು ಉಲ್ಲೇಖಿಸಿದ್ದಾರೆ. ಪೊನ್ನಣ್ಣ ಹಾಗೂ ಮಂಥರ್‌ಗೌಡ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು’ ಎಂದು ಆಗ್ರಹಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಆಸ್ಪತ್ರೆ ಎದುರು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.
ವಿನಯ್ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳ ಕುರಿತೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಮೇರೆಗೆ ರಾತ್ರಿ ಪ್ರತಿಭಟನೆ ಕೈಬಿಡಲಾಯಿತು. ಬಳಿಕ ಕುಟುಂಬದ ಸದಸ್ಯರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ಬಿಗಿ ಭದ್ರತೆಯಲ್ಲಿ ಮೃತದೇಹವನ್ನು ಸ್ವಗ್ರಾಮ ಗೋಣಿಮರೂರಿನತ್ತ ಕೊಂಡೊಯ್ಯಲಾಯಿತು.
‘ವಿನಯ್ ಸೋಮಯ್ಯ ಅವರು ಸಮಾಜಮುಖಿ, ಕ್ರಿಯಾಶೀಲ ವ್ಯಕ್ತಿ ಆಗಿದ್ದರು. ತಮ್ಮ ಹುಟ್ಟೂರಾದ ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ತನ್ನ ತಾಯಿ ಹಾಗೂ ಸ್ನೇಹಿತರನ್ನು ಭೇಟಿಯಾಗಲು ಆಗಾಗ್ಗೆ ಊರಿಗೆ ಹೋಗುತ್ತಿದ್ದರು. ಫೆಬ್ರುವರಿಯಲ್ಲಿ ಕರೆ ಮಾಡಿ, ತನ್ನೀರಾ ಮೈನಾ ಮತ್ತು ಇತರರು ‘ಕೊಡಗಿನ ಸಮಸ್ಯೆಗಳು ಮತ್ತು ಪರಿಹಾರ’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಆಗಿದ್ದಕ್ಕೆ ಸುಳ್ಳು ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದರು. ನಂತರ, ಹೈಕೋರ್ಟ್‌ನಲ್ಲಿ ಎಫ್‌ಐಆರ್‌ಗೆ ತಡೆ ತಂದಿರುವುದಾಗಿ ಹೇಳಿದ್ದರು’ ಎಂದು ಜೀವನ್ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದ ಬಳಿಕವೂ ತನ್ನೀರಾ ಮೈನಾ ಹಾಗೂ ಇತರರು ಕಿರುಕುಳ ನೀಡುತ್ತಿದ್ದರು ಎಂದು ವಿನಯ್ ಹೇಳಿಕೊಂಡಿದ್ದರು. ಮಡಿಕೇರಿ ನಗರ ಠಾಣೆಯ ಪೊಲೀಸರು ಕುಟುಂಬದವರನ್ನು ಭೇಟಿ ಮಾಡಿ ವಿನಯ್ ಕುರಿತು ಮಾಹಿತಿ ನೀಡುವಂತೆ ಒತ್ತಡ ಹೇರುತ್ತಿದ್ದರು. ರೌಡಿಪಟ್ಟಿಗೆ ಸೇರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ನಿರಂತರ ಒತ್ತಡ, ಕಿರುಕುಳ, ಬೆದರಿಕೆಯಿಂದ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಶಾಸಕರಾದ ಎ.ಎಸ್. ಪೊನ್ನಣ್ಣ ಮಂಥರ್ ಗೌಡ ಹಾಗೂ ತನ್ನೀರಾ ಮೈನಾ ಅವರ ಹೆಸರನ್ನು ವಿನಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು ಎಂದು ಹೇಳಲಾಗಿದೆ. ‘ವಾಟ್ಸ್‌ಆ್ಯಪ್ ಗ್ರೂಪ್‌ವೊಂದರ ಅಡ್ಮಿನ್ ಪೈಕಿ ನಾನೂ ಒಬ್ಬ (ಐದು ದಿನಗಳ ಹಿಂದೆ ಅಡ್ಮಿನ್ ಮಾಡಲಾಗಿತ್ತು). ನನ್ನನ್ನು ಹೊಣೆ ಮಾಡಿ ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ಹಾಕಿ ಅಡ್ಮಿನ್‌ಗಳನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟವಡಿದ ತನ್ನೀರಾ ಮೈನಾ ಅವರು ನನ್ನ ಸಾವಿಗೆ ನೇರ ಹೊಣೆ’ ಎಂದು ಬರೆಯಲಾಗಿದೆ.
‘ನಮ್ಮ ಮೇಲೆ ಎಫ್‌ಐಆರ್ ಹಾಕಿಸಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಕೂಡಾ ಇವನೇ. ಎಫ್‌ಐಆರ್ ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆಗೂ ಮಾತಾಡಿಲ್ಲ. ತನ್ನೀರಾ ಮೈನಾನ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತ್ತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆತ್ಮಹತ್ಯೆಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು’ ಎಂದು ಬರೆಯಲಾಗಿದೆ. ‘ಆ ಗ್ರೂಪ್‌ನಲ್ಲಿರುವ ಯಾರನ್ನೇ ಕೇಳಿ ನನ್ನ ಒಂದು ಮೆಸೇಜ್ ಕೂಡಾ ಯಾರ ತೇಜೋವಧೆ ಮಾಡುವ ಹಾಗೂ ಇರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಕೆಲವು ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ಎಫ್‌ಐಆರ್ ಹಾಕಿಸಿದ್ದರು’ ಎಂದು ಉಲ್ಲೇಖಿಸಲಾಗಿದೆ. ‘ಜಾಮೀನು ಸಿಕ್ಕಿದರೂ ವಿರಾಜಪೇಟೆಯ ಶಾಸಕ ಪೊನ್ನಣ್ಣನ ಆದೇಶದಂತೆ ಮಡಿಕೇರಿಯ ಪೊಲೀಸರು ನನ್ನನ್ನು ಹುಡುಕಾಟ ನಡೆಸುತ್ತಿದ್ದರು. ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಮಡಿಕೇರಿ ಶಾಸಕ ಮಂಥರ್‌ಗೌಡ ಗದರಿದ್ದರು. ಗ್ರೂಪ್‌ನಲ್ಲಿ ಹಾಕಿದರೆ ಸರಿ ಇರಲ್ಲ ಎಂದೂ ಹೇಳಿದ್ದರು’ ಎಂದು ಉಲ್ಲೇಖಿಸಲಾಗಿದೆ. ‘ವಿನಯ್ ಅವರ ಹೆಸರಿನಲ್ಲಿರುವ ಬರಹವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಡಿಕೇರಿ: ವಾಟ್ಸ್‌ಆ್ಯಪ್‌ನಲ್ಲಿ ಪ್ರಕಟವಾದ ಪೋಸ್ಟ್ ಆಧರಿಸಿ ಮಡಿಕೇರಿ ನಗರ ಠಾಣೆಯಲ್ಲಿ ವಿನಯ್ ಸೋಮಯ್ಯ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 353(2) 3(5) ಅಡಿ ಫೆಬ್ರುವರಿ 5ರಂದು ಎಫ್‌ಐಆರ್ ದಾಖಲಾಗಿತ್ತು. ‘ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವಂತಹ ಆಕ್ಷೇಪಾರ್ಹ ಸಂದೇಶವನ್ನು ಗ್ರೂಪ್‌ನಲ್ಲಿ ಹಾಕಿದ ರಾಜೇಂದ್ರ ಪಾಪು ಹಾಗೂ ಅದಕ್ಕೆ ಸಹಕರಿಸಿದ ಅಡ್ಮಿನ್‌ಗಳಾದ ವಿಷ್ಣು ನಾಚಪ್ಪ ಹಾಗೂ ವಿನಯ್ ಸೋಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತನ್ನೀರಾ ಮೈನಾ ದೂರು ನೀಡಿದ್ದರು. ದುಃಸ್ಥಿತಿಯಲ್ಲಿರುವ ಶೌಚಾಲಯದ ಚಿತ್ರದ ಮೇಲೆ ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿದ್ದ ಶಾಸಕ ಎ.ಎಸ್.ಪೊನ್ನಣ್ಣ ಅವರ ಚಿತ್ರ ಹಾಕಿ ‘ಸ್ವಚ್ಛ ಭಾರತ್’ ‘ಸ್ವಚ್ಛ ವಿರಾಜಪೇಟೆ’ ‘ಪೊನ್ನಣ್ಣ ಶೌಚಾಲಯ’ ಎಂದು ಬರೆದು ರಾಜೇಂದ್ರ ಪಾಪು ಎಂಬುವವರು ಪೋಸ್ಟ್ ಹಾಕಿದ್ದರು. ಸಾಂಪ್ರದಾಯಿಕ ಉಡುಪು ಧರಿಸಿದ್ದವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೊಡಗಿನಲ್ಲಿ ಪ್ರತಿಭಟನೆಗಳು ನಡೆದಿದ್ದವು. ವಿನಯ್ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮ ಗೋಣಿಮರೂರಿನಲ್ಲಿ ಸಿದ್ಧತೆಗಳು ನಡೆದಿವೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ತನ್ನೀರಾ ಮೈನಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಸೆಕ್ಷನ್ 3(5) (ಅಪರಾಧಿಕ ಸಂಚು) 351(2)(ಬೆದರಿಕೆ) ಹಾಗೂ 352ರ (ಉದ್ದೇಶ ಪೂರ್ವಕವಾಗಿ ಅವಮಾನ) ಅಡಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.