ADVERTISEMENT

ನ್ಯಾಯಾಂಗ ಬಂಧನಕ್ಕೆ ಚೇತನ್‌, ಜಾಮೀನು ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 16:26 IST
Last Updated 23 ಫೆಬ್ರುವರಿ 2022, 16:26 IST
ನಟ ಚೇತನ್
ನಟ ಚೇತನ್   

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆಂಬ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದ ನಟ ಎ. ಚೇತನ್ ಕುಮಾರ್ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

‘ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ (ಐಪಿಸಿ 505 (2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ (ಐಪಿಸಿ 504) ನೀಡಿದ್ದಾರೆ’ ಎಂಬ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಶೇಷಾದ್ರಿಪುರ ಪೊಲೀಸರು, ಚೇತನ್ ಅವರನ್ನು ಅವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಬಂಧಿಸಿದ್ದರು.

ಚೇತನ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಚೇತನ್‌ ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ADVERTISEMENT

ಜಾಮೀನು ಕೋರಿ ಅರ್ಜಿ:
ಚೇತನ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ವಕೀಲ ಎಸ್‌. ಬಾಲನ್ ಅವರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.