ADVERTISEMENT

ನ್ಯಾಯಾಧೀಶರ ಬಗ್ಗೆ ಪ್ರಚೋದನಕಾರಿ ಹೇಳಿಕೆ: ನಟ ಚೇತನ್ ಒಸಿಐ ವೀಸಾ ರದ್ದು

ಕಾರ್ಡ್ ಹಿಂದಿರುಗಿಸಲು 15 ದಿನ ಗಡುವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 13:05 IST
Last Updated 15 ಏಪ್ರಿಲ್ 2023, 13:05 IST
ನಟ ಚೇತನ್
ನಟ ಚೇತನ್   

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರು ಉಲ್ಲೇಖಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ನಟ ಚೇತನ್ ಕುಮಾರ್ ಅವರ ಭಾರತದ ಸಾಗರೋತ್ತರ ನಾಗರಿಕ (ಒಸಿಐ) ವೀಸಾವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಪಡಿಸಿದೆ.

ಈ ಸಂಬಂಧ ಚೇತನ್ ಅವರಿಗೆ ಪತ್ರ ಕಳುಹಿಸಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು, ‘15 ದಿನದೊಳಗೆ ಒಸಿಐ ಕಾರ್ಡ್ ಹಿಂದಿರುಗಿಸಿ’ ಎಂದು ಸೂಚನೆ ನೀಡಿದೆ.

ಒಸಿಐ ರದ್ದುಪಡಿಸಿದ್ದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮಾರ್ಚ್ 28ರಂದು ಆದೇಶ ಹೊರಡಿಸಿದೆ. ಇದಾದ ನಂತರ, ಎಫ್‌ಆರ್‌ಆರ್‌ಒ ಮೂಲಕ ಚೇತನ್‌ ಅವರಿಗೆ ಏಪ್ರಿಲ್ 14ರಂದು ಪತ್ರ ತಲುಪಿದೆ.

ADVERTISEMENT

ಶೇಷಾದ್ರಿಪುರ ಠಾಣೆ ಎಫ್‌ಐಆರ್: ‘ಹಿಜಾಬ್‌ ವಿವಾದದ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ನೀಡಿತ್ತು. ಅದೇ ವಿಚಾರವಾಗಿ ನ್ಯಾಯಮೂರ್ತಿಯೊಬ್ಬರ ಹೆಸರು ಉಲ್ಲೇಖಿಸಿ ದೇಶ ವಿರೋಧಿ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಚೇತನ್ ಪೋಸ್ಟ್ ಪ್ರಕಟಿಸಿದ್ದರು. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘21ನೆಯ ಶತಮಾನದಲ್ಲೂ ನ್ಯಾಯಮೂರ್ತಿಯವರ ಈ ಸ್ತ್ರೀ ದ್ವೇಷ ನಾಚಿಕೆಗೇಡಿನ ಸಂಗತಿ. ಇಂಥ ಅಸಹ್ಯಕರ ಹೇಳಿಕೆ ನೀಡಿದ್ದ ಅದೇ ನ್ಯಾಯಮೂರ್ತಿ, ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಬೇಕೇ ? ಅಥವಾ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಈ ಕುರಿತು ಬೇಕಾದ ಸ್ಪಷ್ಟತೆಯಿದೆಯೇ?’ ಎಂಬುದಾಗಿ ಚೇತನ್‌ ಪೋಸ್ಟ್‌ನಲ್ಲಿ ತಿಳಿಸಿದ್ದರು. ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ (ಐಪಿಸಿ 505 (2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ ನೀಡಿದ (ಐಪಿಸಿ 504) ಆರೋಪದಡಿ ಚೇತನ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಶೋಕಾಸ್ ನೀಡಿದ್ದ ಎಫ್‌ಆರ್‌ಆರ್‌ಒ: ‘ಚೇತನ್‌ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಎಫ್‌ಆರ್‌ಆರ್‌ಒ ಅಧಿಕಾರಿಗಳು, ಹೇಳಿಕೆ ಬಗ್ಗೆ ಸ್ಪಷ್ಟನೆ ಕೋರಿ ಶೋಕಾಸ್ ಜಾರಿ ಮಾಡಿದ್ದರು. ‘ನಿಮ್ಮ ಒಸಿಐ ವೀಸಾವನ್ನು ರದ್ದು ಮಾಡಲು ಕೇಂದ್ರ ಸರ್ಕಾರಕ್ಕೆ ಏಕೆ ಪ್ರಸ್ತಾವ ಸಲ್ಲಿಸಬಾರದು’ ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಶೋಕಾಸ್‌ಗೆ ಉತ್ತರಿಸಿದ್ದ ಚೇತನ್, ‘ನಾನು ಸಾಮಾಜಿಕ ಕೆಲಸ ಹಾಗೂ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದೇನೆ. ಭಾರತೀಯ ಯುವತಿಯನ್ನು ಮದುವೆ ಸಹ ಆಗಿದ್ದೇನೆ’ ಎಂದಿದ್ದರು. ಇದರ ಬೆನ್ನಲ್ಲೇ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಆರೋಪದಡಿ ಚೇತನ್‌ನನ್ನು ಶೇಷಾದ್ರಿಪುರ ಪೊಲೀಸರು ಮಾರ್ಚ್ 21ರಂದು ಎರಡನೇ ಬಾರಿ ಬಂಧಿಸಿದ್ದರು. ಇದಾಗಿ ಎರಡು ದಿನಕ್ಕೆ ಒಸಿಐ ವೀಸಾ ರದ್ದು ಬಗ್ಗೆ ಆದೇಶ ಹೊರಬಿದ್ದಿದೆ’ ಎಂದು ಮೂಲಗಳು ತಿಳಿಸಿವೆ.

ದೇಶ ತೊರೆಯಲು ಸೂಚನೆ: ‘ಒಸಿಐ ಕಾರ್ಡ್ ಹಿಂದಿರುಗಿಸಿದ ನಂತರ ಚೇತನ್ ದೇಶ ತೊರೆಯಬೇಕು. ಪುನಃ ವೀಸಾಗೆ ಅರ್ಜಿ ಸಲ್ಲಿಸಿ, ಅದು ದೊರೆತ ನಂತರವೇ ವಾಪಸು ದೇಶದೊಳಗೆ ಬರಲು ಅವಕಾಶವಿದೆ’ ಎಂದು ಎಫ್‌ಆರ್‌ಆರ್‌ಒ ಮೂಲಗಳು ಹೇಳಿವೆ.
ಒಸಿಐ ರದ್ದು ಸಂಬಂಧ ಪ್ರತಿಕ್ರಿಯೆ ಪಡೆಯಲು ನಟ ಚೇತನ್ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.