ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಬಂದೂಕು ಪರವಾನಗಿ ರದ್ದು ಮಾಡದಂತೆ ದರ್ಶನ್‌ ಕೋರಿಕೆ

ಪೊಲೀಸರ ನೋಟಿಸ್‌ಗೆ ದರ್ಶನ್‌ ಉತ್ತರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 16:04 IST
Last Updated 16 ಜನವರಿ 2025, 16:04 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಬಂದೂಕು ಪರವಾನಗಿ ರದ್ದತಿಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟಿಸ್‌ಗೆ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರು ಉತ್ತರಿಸಿದ್ದಾರೆ. ಪರವಾನಗಿ ರದ್ದು ಮಾಡದಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರೇಟ್‌ನ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಅವರು ಜ.7ರಂದು ಬಂದೂಕು ಪರವಾನಗಿ ರದ್ದುಗೊಳಿಸುವ ಸಂಬಂಧ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‌ಗೆ ದರ್ಶನ್‌ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನನಗೆ ಬಂದೂಕು ಪರವಾನಗಿ ಬೇಕು. ನಾನು ಸೆಲೆಬ್ರಿಟಿ ಆಗಿದ್ದು, ಹೋದ ಕಡೆ ಹೆಚ್ಚಿನ ಜನರು ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದರೂ ವೈಯಕ್ತಿಕ ರಕ್ಷಣೆಗಾಗಿ ಬಂದೂಕು ಪರವಾನಗಿ ಅವಶ್ಯಕತೆಯಿದೆ. ಬಂದೂಕು ಪರವಾನಗಿ ರದ್ದು ಮಾಡಬೇಡಿ’ ಎಂದು ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

‘ನನ್ನ ವಿರುದ್ಧ ದಾಖಲಾದ ಪ್ರಕರಣದ ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಬಹುದು. ಅಂತಹ ತಪ್ಪು ಕೂಡ ನಾನು ಮಾಡುವುದಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಕರಣದ ಸಾಕ್ಷಿದಾರರನ್ನು ಬೆದರಿಸುವ ಸಾಧ್ಯತೆಗಳಿದ್ದು, ಬಂದೂಕು ಪರವಾನಗಿ ರದ್ದತಿಗಾಗಿ ನೋಟಿಸ್‌ ಜಾರಿ ಮಾಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್‌ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.