ರಜನಿಕಾಂತ್
ಬೆಂಗಳೂರು: ‘ನನ್ನ ನಟನೆಯ ವೃತ್ತಿ ಆರಂಭವಾಗಿದ್ದೇ ಎಪಿಎಸ್‌ನಿಂದ’ ಎಂದಿರುವ ನಟ ರಜನಿಕಾಂತ್ ನಗರದಲ್ಲಿ ಕಳೆದ ಹೈಸ್ಕೂಲು ದಿನಗಳ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಸದ್ಯ ಬ್ಯಾಂಕಾಕ್‌ನಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ರಜನಿಕಾಂತ್ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬಸವನಗುಡಿಯ ಎಪಿಎಸ್ (ಆಚಾರ್ಯ ಪಾಠ ಶಾಲಾ) ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕಾಗಿ ವಿಡಿಯೊವೊಂದನ್ನು ಕಳುಹಿಸಿ ಕನ್ನಡದಲ್ಲೇ ಶುಭಕೋರಿದ್ದಾರೆ.
‘ಎಪಿಎಸ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗಿದ್ದಿದ್ದರೆ ಸಂತೋಷವಾಗುತ್ತಿತ್ತು. ಎಪಿಎಸ್ ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ನಾನು ಓದಿದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಗವಿಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದೆ. ಅದು ಕನ್ನಡ ಮಾಧ್ಯಮ. ತುಂಬಾ ಚೆನ್ನಾಗಿ ಓದುತ್ತಿದ್ದೆ. ತರಗತಿಗೆ ನಾನೇ ಮೊದಲು. ನಾನೇ ತರಗತಿಯ ನಾಯಕನಾಗಿದ್ದೆ. ಶೇ 98 ಅಂಕ ಪಡೆದು ಉತ್ತೀರ್ಣನಾಗಿದ್ದೆ. ಆಗ ಆ ಶಾಲೆಗೆ ಹತ್ತಿರವಾಗಿದ್ದ ದೊಡ್ಡ ಶಾಲೆಗಳೆಂದರೆ ನ್ಯಾಷನಲ್ ಕಾಲೇಜು ಮತ್ತು ಎಪಿಎಸ್ ಹೈಸ್ಕೂಲ್ ಮತ್ತು ಕಾಲೇಜು’ ಎಂದು ನೆನಪಿಸಿಕೊಂಡಿದ್ದಾರೆ.
ನಾಟಕ, ಅಭಿನಯ ಮೆಲುಕು
ಹೈಸ್ಕೂಲ್‌ನಲ್ಲಿದ್ದಾಗ ಆಡಿದ್ದ ನಾಟಕವೊಂದನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ‘ಎಪಿಎಸ್ ಹೈಸ್ಕೂಲ್‌ನಲ್ಲಿ ಓದುತ್ತಿರುವಾಗ ಪ್ರತಿವರ್ಷ ಅಂತರ್‌ಶಾಲಾ ನಾಟಕ ಸ್ಪರ್ಧೆ ನಡೆಯುತ್ತಿತ್ತು. ಹತ್ತು ಹದಿನೈದು ಶಾಲೆಗಳು ಅದರಲ್ಲಿ ಭಾಗವಹಿಸುತ್ತಿದ್ದವು. ನಾನು ಆಗ ತರಗತಿಗೆ ಶಿಕ್ಷಕರು ಬರುವುದು ವಿಳಂಬವಾದರೆ ನಟನೆ ಮಾಡುತ್ತಾ ಸ್ನೇಹಿತರಿಗೆ ಕಥೆಗಳನ್ನು ಹೇಳುತ್ತಿದ್ದೆ. ಈ ವಿಷಯ ಟೀಚರ್‌ಗಳ ಕಿವಿಗೂ ಬಿದ್ದಿತ್ತು. ಅವರು ನನಗೆ ನಾಟಕವೊಂದರಲ್ಲಿ ಅವಕಾಶ ನೀಡಿದರು. ಆದಿಶಂಕರ ಮತ್ತು ಚಾಂಡಾಲ ಭೇಟಿಯ ನಾಟಕವದು. ಈ ದೃಶ್ಯದಲ್ಲಿ ನಾನು ಚಾಂಡಾಲನ ಪಾತ್ರ ನಿರ್ವಹಿಸಿದ್ದೆ. ನೋಡಲು ಚಾಂಡಾಲನಂತೆ ಕಾಣುತ್ತಿದ್ದುದರಿಂದ ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದರು ಎನ್ನಿಸುತ್ತದೆ. ಈ ನಾಟಕಕ್ಕಾಗಿ ನಮ್ಮ ತಂಡಕ್ಕೆ ಪ್ರಶಸ್ತಿ ಸಿಕ್ಕಿತು. ನನಗೆ ಅತ್ಯುತ್ತಮ ನಟ ಎಂಬ ದೊಡ್ಡ ಕಪ್ ಕೊಟ್ಟರು. ಆಗಿನಿಂದಲೇ ನನ್ನನ್ನು ನಟ ಎಂದು ಅಂಗೀಕಾರ ಮಾಡಿ, ನಟನೆಯನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳುವಂತೆ ಮಾಡಿದ್ದು ಎಪಿಎಸ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಆ ಹೈಸ್ಕೂಲ್, ಕಲ್ಲಿನ ಕಟ್ಟಡ, ಎದುರಿರುವ ಮೈದಾನ, ಅಲ್ಲಿ ಆಡಿದ ಆಟಗಳನ್ನು ಮರೆಯಲು ಸಾಧ್ಯವಿಲ್ಲ. ಹೈಸ್ಕೂಲ್‌ಗೆ ಹೋಗುವಾಗ ನಮ್ಮ ಮನೆ ಹನುಮಂತನಗರದಲ್ಲಿತ್ತು. ಅಲ್ಲಿಂದ ನಡೆದು ಹೈಸ್ಕೂಲ್ ಹೋಗುವ ರಸ್ತೆ ಯಾವಾಗಲು ಮನಸ್ಸಿನಲ್ಲಿ ಹಚ್ಚಹಸಿರಾಗಿರುತ್ತದೆ’ ಎಂದು ನೆನಪು ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.