ADVERTISEMENT

ಚಿನ್ನ ಕಳ್ಳಸಾಗಣೆ: ತಪ್ಪೊಪ್ಪಿಕೊಂಡ ನಟಿ– ರನ್ಯಾಗೆ ರಾಜಕಾರಣಿಗಳ ನಂಟು!

ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಯೊಬ್ಬರಿಗೆ ನೀಡುವುದಕ್ಕಾಗಿಯೇ ನಟಿ ಚಿನ್ನ ಖರೀದಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 1:20 IST
Last Updated 8 ಮಾರ್ಚ್ 2025, 1:20 IST
ರನ್ಯಾರಾವ್
ರನ್ಯಾರಾವ್    

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್ ಅವರಿಗೆ ರಾಜಕಾರಣಿಗಳ ನಂಟು ಇರುವುದು ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಯೊಬ್ಬರಿಗೆ ನೀಡುವುದಕ್ಕಾಗಿಯೇ ನಟಿ ಚಿನ್ನ ಖರೀದಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.  

‘ಯುರೋಪ್‌, ಅಮೆರಿಕ ಮತ್ತು ಪಶ್ಚಿಮ ಏಷ್ಯಾ, ದುಬೈಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಕೆಲವರು ಬ್ಲ್ಯಾಕ್‌ಮೇಲ್ ಮಾಡಿದ್ದರಿಂದ ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಮಾಡಬೇಕಾಯಿತು’ ಎಂಬುದನ್ನು ವಿಚಾರಣೆ ವೇಳೆ ಡಿಆರ್‌ಐ ಅಧಿಕಾರಿಗಳಿಗೆ ರನ್ಯಾ ರಾವ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ತಮ್ಮ ಹೆಸರನ್ನು ಹರ್ಷವರ್ಧಿನಿ ರನ್ಯಾ, ಉದ್ಯಮಿ ಕೆ.ಎಸ್.ಹೆಗ್ದೇಶ್‌ ಅವರ ಪುತ್ರಿ ಎಂದು ಉಲ್ಲೇಖಿಸಿದ್ದಾರೆ. ‌

‘ದ್ವಿತೀಯ ಪಿ.ಯು.ಸಿ ವರೆಗೂ ಓದಿದ್ದು, ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಜತೆಗೆ ವನ್ಯಜೀವಿ ಛಾಯಾಗ್ರಾಹಕಿ. ದುಬೈನಲ್ಲಿ ರಿಯಲ್‌ ಎಸ್ಟೇಟ್‌ ಕೆಲಸ ಮಾಡುತ್ತಿದ್ದೇನೆ. ವಾಸ್ತುಶಿಲ್ಪಿ ಜತಿನ್ ಹುಕ್ಕೇರಿ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದೇನೆ’ ಎಂದು ತನಿಖಾಧಿಕಾರಿಗೆ ತಿಳಿಸಿದ್ದಾರೆ.

‘ವಿಮಾನ ನಿಲ್ದಾಣದಲ್ಲಿ ನನ್ನ ಬಳಿ ಇದ್ದ 17 ಚಿನ್ನದ ಬಿಸ್ಕತ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದೇನೆ. ಪ್ರಯಾಣದಿಂದ ಸಾಕಷ್ಟು ದಣಿದಿದ್ದು, ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ರನ್ಯಾ ನೀಡಿರುವ ಹೇಳಿಕೆಯನ್ನು ತನಿಖಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ರನ್ಯಾ ಅವರು ಚಿನ್ನದ ಬಿಸ್ಕತ್‌ಗಳನ್ನು ದುಬೈನಿಂದ ತಂದು ನಗರದಲ್ಲಿ ಎರಡು ಪ್ರತಿಷ್ಠಿತ ಚಿನ್ನದ ಮಳಿಗಗಳಿಗೆ ನೀಡುತ್ತಿದ್ದರು ಎನ್ನುವ ಅನುಮಾನದ ಮೇಲೆ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅವರ ಹೇಳಿಕೆ ದಾಖಲಿಸಿಕೊಂಡು ವಾಪಸ್‌ ಕಳುಹಿಸಿದ್ದಾರೆ. ಮತ್ತೆ ವಿಚಾರಣೆಗೆ ಬರುವಂತೆ ತನಿಖಾಧಿಕಾರಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ದುಬೈನಿಂದ ಚಿನ್ನವನ್ನು ತಂದು ಕೊಡುವಂತೆ ಕೆಲವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂಬುದಾಗಿ ರನ್ಯಾ ರಾವ್ ಹೇಳಿಕೆ ನೀಡಿದ್ದು ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೂರು ದಿನ ಕಸ್ಟಡಿಗೆ ನಟಿ ರನ್ಯಾ ರಾವ್‌

ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮೂರು ದಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯನ್ನು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಡಿಆರ್‌ಐ ಕೋರಿತ್ತು. ಮಾರ್ಚ್ 9 ರಿಂದ 11ರ ವರೆಗೆ ನಟಿಯನ್ನು ಕಸ್ಟಡಿಗೆ ನೀಡಿ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಆದೇಶಿಸಿದ್ದಾರೆ. ಬಾಡಿತು ನಟಿಯ ಮುಖ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ರನ್ಯಾ ರಾವ್ ಅವರ ಮುಖ ಚಹರೆ ಬದಲಾಗಿರುವ ಬಗ್ಗೆ ಜಾಲತಾಣದಲ್ಲಿ ಫೋಟೊ ಹರಿದಾಡುತ್ತಿದೆ. ಐದು ದಿನದಲ್ಲಿ ರನ್ಯಾ ರಾವ್ ಮುಖ ಕಳೆಗುಂದಿದ್ದು ಅವರ ಮೊದಲಿನ ಫೋಟೋಗಳಿಗೂ ಈಗ ಇರುವ ಸ್ಥಿತಿಗೂ ಗುರುತು ಹಿಡಿಯಲಾಗಷ್ಟು ವ್ಯತ್ಯಾಸ ಕಾಣುತ್ತಿದೆ. ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವ ಕಾರಣ ನೆಮ್ಮದಿ ಕಳೆದುಕೊಂಡಿರುವ ನಟಿ ಸರಿಯಾಗಿ ಊಟ ನಿದ್ದೆ ಇಲ್ಲದೆ ಮುಖ ಬಾಡಿದೆ ಕಣ್ಣುಗಳು ಊದಿಕೊಂಡಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.