ಸಸಾಂದರ್ಭಿಕ ಚಿತ್ರ
ಬೆಂಗಳೂರು: ಕಾಡು ಕುರುಬ ಮತ್ತು ಕಾಡುಗೊಲ್ಲ ಸಮುದಾಯಗಳ ಗುಣ ಲಕ್ಷಣಗಳನ್ನೇ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯಕ್ ಅವರಿಗೆ ರಾಜ್ಯ ಹಳ್ಳಿಕಾರರ ಸಂಘ ಮನವಿ ಮಾಡಿದೆ.
ಹಳ್ಳಿಕಾರ ಸಮುದಾಯದ ಕುಲಕಸುಬು ಪಶುಸಂಗೋಪನೆ. ಶತಮಾನಗಳಿಂದ ಸಾಕಿ ಸಲುಹಿದ ರಾಸುಗಳಿಗೆ ತನ್ನದೇ ಜಾತಿಯ ಹೆಸರು ಬಂದಿದೆ. ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಈಟಿ, ಭರ್ಜಿ ಹಾಗೂ ಕಠಾರಿಗಳನ್ನು ಉಪಯೋಗಿಸುತ್ತಿದ್ದು ಇತಿಹಾಸದ ಪುಟಗಳಲ್ಲಿ ಕಂಡು ಬಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ತಿಳಿಸಿದ್ದಾರೆ.
ಸಮುದಾಯದ ಆಚಾರ–ವಿಚಾರಗಳು ಕಾಡುಕುರುಬ ಮತ್ತು ಕಾಡುಗೊಲ್ಲ ಸಮುದಾಯದ ಆಚಾರ–ವಿಚಾರಗಳಿಗೆ ತಾಳೆಯಾಗುತ್ತವೆ. ಕುಟುಂಬಗಳ ನಿರ್ವಹಣೆ ಮಾಡಲಾಗದೇ ಶೇಕಡ 75ರಷ್ಟು ಮಕ್ಕಳನ್ನು 7ರಿಂದ 10ನೇ ತರಗತಿಯೊಳಗೆ ಶಿಕ್ಷಣದಿಂದ ಬಿಡಿಸಿ ನಗರ ಪ್ರದೇಶಗಳಿಗೆ ವಲಸೆ ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಳ್ಳಿಕಾರ ಸಮುದಾಯವನ್ನು ಒಕ್ಕಲಿಗ ಸಮುದಾಯದ ಕೆಳಗೆ ನಮೂದಿಸಿರುವುದರಿಂದ ನ್ಯಾಯ ದೊರಕಿಲ್ಲ. ಪ್ರವರ್ಗ–3ಎ ಪಟ್ಟಿಯಿಂದ ಹೊರತುಪಡಿಸಿ ಪ್ರವರ್ಗ–1ಕ್ಕೆ ಸೇರ್ಪಡೆ ಮಾಡಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.