ಬೆಂಗಳೂರು: ‘ಗೋರಕ್ಷನಾಥರು ನಾಥ ಪಂಥಕ್ಕೆ ಅಡಿಪಾಯ ಹಾಕಿದ ಮೂಲ ಪುರುಷ. ಅವರು ಎರಡನೇ ಶತಮಾನಕ್ಕೆ ಸೇರಿದವರು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನವು ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ‘ನಾಥ ಪರಂಪರೆಯ ದರ್ಶನ–ಸ್ವರೂಪ’ ಕುರಿತ ವಿಚಾರ ಸಂಕಿರಣದಲ್ಲಿ ಶನಿವಾರ ಮಾತನಾಡಿದರು.
‘ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಅಲ್ಲಮಪ್ರಭು, ಗೋರಕ್ಷನಾಥರನ್ನು ಸೋಲಿಸಿದ ಉಲ್ಲೇಖವಿದೆ. ಅವರಿಗೂ ನಾಥ ಪಂಥದ ಮೂಲ ಪುರುಷರಾಗಿರುವ ಗೋರಕ್ಷನಾಥರಿಗೂ ಯಾವ ಸಂಬಂಧವೂ ಇಲ್ಲ.ನಾಥ ಪರಂಪರೆಯ ಗ್ರಂಥಗಳು ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವಾಗುತ್ತಿದೆ’ ಎಂದರು.
ಕವಿ ಎಚ್.ಎಸ್.ಶಿವಪ್ರಕಾಶ್ ‘ಬಹುಸಂಖ್ಯಾತ ನಾಥ ಪರಂಪರೆಯ ಬಗ್ಗೆ ಅಧ್ಯಯನಗಳು ನಡೆಯಬೇಕು. ನಾಥ ಪರಂಪರೆಯಲ್ಲಿ ಶಿವನೆಂದರೆ ನಮ್ಮೊಳಗೆ ಅಡಗಿರುವ ತತ್ವ ಅರಿಯುವುದು. ಪಂಚಭೂತದಿಂದ ಕೂಡಿರುವ ಶರೀರದಿಂದ ಆಧ್ಯಾತ್ಮ ಸತ್ಯ ತಿಳಿಯುವುದಾಗಿದೆ’ ಎಂದು ತಿಳಿಸಿದರು.
ಲೇಖಕ ಡಾ.ಟಿ.ಎಸ್.ವಾಸುದೇವಮೂರ್ತಿ ‘ಶೈವ, ಬೌದ್ಧ ಧರ್ಮಗಳು ನಾಥ ಪಂಥದ ಮೇಲೆ ಪ್ರಭಾವ ಬೀರಿವೆಯೋ ಅಥವಾ ನಾಥ ಪರಂಪರೆಯೇ ಶೈವ-ಬೌದ್ಧ ಧರ್ಮಗಳ ಮೇಲೆ ಪ್ರಭಾವಿಸಿದೆಯೋ ಎಂಬುದನ್ನು ಗುರುತಿಸುವುದು ಕಷ್ಟ.ಆಧ್ಯಾತ್ಮಿಕವಾಗಿ ಭಾರತವನ್ನು ಒಗ್ಗೂಡಿಸಿರುವುದು ನಾಥ ಪರಂಪರೆ. ಇದು ಯಾವುದೇ ಜಾತಿಗೆ ಸೀಮಿತವಾಗಿಲ್ಲ’ ಎಂದರು.
ಪ್ರೊ.ಚಂದ್ರಶೇಖರಯ್ಯ ‘ನಾಥ ಪೀಠದ ಶಕ್ತಿಕೇಂದ್ರ ಆದಿಚುಂಚನಗಿರಿ. ಬದುಕಿನ ಆಧ್ಯಾತ್ಮಿಕತೆಯನ್ನು ತಿಳಿಸಿಕೊಡುವ ಬಹಳ ದೊಡ್ಡ ಪರಂಪರೆ ನಾಥ ಪರಂಪರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.