
ನಗರದಲ್ಲಿ ಆಯೋಜಿಸಿದ್ದ ಅಡಿಗಾಸ್ ಯಾತ್ರಾದ 32ನೇ ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ನೂತನ ಲೋಗೊ ಅನಾವರಣಗೊಳಿಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಭಾರತವು ಪುರಾತನ ಹಾಗೂ ಮಹತ್ವದ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಮುಖ ದೇಶವಾಗಿದ್ದು, ಪ್ರವಾಸೋದ್ಯಮವು ಇಲ್ಲಿ ವಿಪುಲವಾಗಿ ಬೆಳೆದಿದೆ. ಭಾರತಕ್ಕೆ ಬರುವ ಪ್ರವಾಸಿಗರಿಗೆ ಆತಿಥ್ಯ ನೀಡುವಲ್ಲಿ ನಾವು ಇನ್ನಷ್ಟು ಪ್ರವಾಸಿ ಸ್ನೇಹಿ ನಡವಳಿಕೆಗಳನ್ನು ಬೆಳೆಸಿಕೊಳ್ಳಬೇಕು’ ಎಂದು ನಟಿ ಅದಿತಿ ಪ್ರಭುದೇವ ಸಲಹೆ ನೀಡಿದರು.
ಭಾನುವಾರ ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಅಡಿಗಾಸ್ ಯಾತ್ರಾದ 32ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಪಾನ್ ಅಳವಡಿಸಿಕೊಂಡಿರುವ ಮಾದರಿಗಳು ಚೆನ್ನಾಗಿವೆ. ಆ ದೇಶಕ್ಕೆ ಹೋಗುವ ಪ್ರವಾಸಿಗರನ್ನು ಆತ್ಮೀಯವಾಗಿ ಕಾಣುವ ಜತೆಗೆ ಪ್ರವಾಸಿ ತಾಣಗಳ ಕುರಿತ ಎಲ್ಲಾ ರೀತಿಯ ಮಾಹಿತಿ ನೀಡಲಾಗುತ್ತದೆ. ಇಂತಹ ವ್ಯವಸ್ಥೆ ಹಲವು ದೇಶಗಳಲ್ಲಿ ಇರುವುದನ್ನು ಪ್ರವಾಸಕ್ಕೆ ಹೋದಾಗ ನಾನೇ ನೋಡಿದ್ದೇನೆ’ ಎಂದು ತಿಳಿಸಿದರು.
‘ಭಾರತದಲ್ಲಿ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕು. ಹಲವು ಕಡೆ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತದೆ. ಕರ್ನಾಟಕದಲ್ಲಿ ವಿಶ್ವದ ಗಮನ ಸೆಳೆಯಬಲ್ಲ ಪ್ರವಾಸಿ ತಾಣಗಳಿದ್ದರೂ ಕೆಲವು ಕಡೆ ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳಲ್ಲಿ ಇನ್ನೂ ಹಿಂದುಳಿದಿವೆ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಪ್ರವಾಸೋದ್ಯಮ ವಲಯ ಈಗ ವಿಪುಲವಾಗಿ ಬೆಳೆದಿದೆ. ಯಾವುದೇ ದೇಶಕ್ಕೆ ಹೋಗಿ ಬರಲು ವ್ಯವಸ್ಥೆಗಳಾಗಿವೆ. ಅಡಿಗಾಸ್ ಯಾತ್ರಾ ಮೂಲಕವೇ ವರ್ಷಕ್ಕೆ ಸಾವಿರಾರು ಮಂದಿ ಪ್ರವಾಸ ಕೈಗೊಳ್ಳುತ್ತಾರೆ. ಉತ್ತರ ಕರ್ನಾಟಕದ ಜನರಿಗೂ ಪ್ರವಾಸದ ಅನುಕೂಲಗಳು ಹೆಚ್ಚು ಸಿಗುವಂತಾಗಬೇಕು’ ಎಂದು ಹೇಳಿದರು.
ಹರಿಹರದ ಹರ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ಪ್ರವಾಸವು ಪ್ರತಿಯೊಬ್ಬರನ್ನೂ ಪ್ರಫುಲ್ಲವಾಗಿ ಇಡಬಲ್ಲದು. ನಾನೇ ಈವರೆಗೂ 86 ದೇಶಗಳಿಗೆ ಪ್ರವಾಸ ಕೈಗೊಂಡಿದ್ದೇನೆ. 32 ವರ್ಷದಿಂದ ಪ್ರವಾಸೋದ್ಯಮ ಕ್ಷೇತ್ರದ ಭಾಗವಾಗಿ ಅಡಿಗಾಸ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಪತ್ರಕರ್ತ ವಿಶ್ವೇಶ್ವರ ಭಟ್, ಕರ್ನಾಟಕ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ, ಅಡಿಗಾಸ್ ಯಾತ್ರಾದ ಮುಖ್ಯಸ್ಥ ಕೆ. ನಾಗರಾಜ ಅಡಿಗ, ಆಶಾ ಎನ್. ಅಡಿಗ ಉಪಸ್ಥಿತರಿದ್ದರು.
ಇದೇ ವೇಳೆ ಅಡಿಗಾಸ್ ಯಾತ್ರಾ ನ್ಯೂಸ್ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ನೂತನ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.