ADVERTISEMENT

ಏರೋ ಇಂಡಿಯಾದಿಂದ ಎಚ್‌ಎಎಲ್‌ ಉತ್ಪಾದಕತೆ ಕುಸಿತ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:21 IST
Last Updated 24 ಫೆಬ್ರುವರಿ 2019, 20:21 IST
   

ಬೆಂಗಳೂರು: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಏರೋ ಇಂಡಿಯಾ’ ಪ್ರದರ್ಶನದ ಪ್ರಧಾನ ಭೂಮಿಕೆಯನ್ನು ಎಚ್‌ಎಎಲ್‌ ಸಂಸ್ಥೆಯೇ ನಿರ್ವಹಿಸುತ್ತಿರುವುದರಿಂದ ಅದರ ವೈಮಾನಿಕ ಉತ್ಪನ್ನಗಳ ಉತ್ಪಾದಕತೆ ಕುಸಿತ ಆಗುತ್ತಿದೆ ಎಂದು ಎಚ್‌ಎಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರೋ ಇಂಡಿಯಾ ಪ್ರದರ್ಶನದ ಸಿದ್ಧತೆಗೆ ಸುಮಾರು ಐದರಿಂದ ಆರು ತಿಂಗಳುಗಳು ಬೇಕಾಗುವುದರಿಂದ ಸಂಸ್ಥೆಯ ಎಲ್ಲ ಕಾರ್ಯಗಳನ್ನು ಬದಿಗೊತ್ತಿ, ಇದಕ್ಕೆ ಗಮನ ಹರಿಸುವುದರಿಂದ ವೈಮಾನಿಕ ಉತ್ಪನ್ನಗಳ ಉತ್ಪಾದಕತೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಚ್‌ಎಎಲ್‌ ನಿರ್ಮಿತ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳು ಬಿಕರಿ ಆಗಬೇಕಿದ್ದರೆ ಇಂತಹ ಪ್ರದರ್ಶನಗಳಲ್ಲಿ ವೈಮಾನಿಕ ಸಾಮರ್ಥ್ಯದ ಪ್ರದರ್ಶನದ ಅಗತ್ಯತೆ ಇದೆ. ಈ ಪ್ರದರ್ಶನದ ಪ್ರಮುಖ ವ್ಯವಸ್ಥೆಗಳನ್ನು ನಿರ್ವಹಿಸುವ ಜವಾಬ್ದಾರಿಯೂ ಎಚ್‌ಎಎಲ್‌ನದೇ ಆಗಿದೆ. ಅಂತರ ರಾಷ್ಟ್ರೀಯ ವೈಮಾನಿಕ ಸಂಸ್ಥೆಗಳನ್ನು ಆಹ್ವಾನಿಸುವುದರಿಂದ ಹಿಡಿದು ಎಲ್ಲ ವ್ಯವಸ್ಥೆಗಳನ್ನೂ ಮಾಡಲೇಬೇಕು. ವೈಮಾನಿಕ ಪ್ರದರ್ಶನಕ್ಕೆ ವಾಯು ನೆಲೆಯನ್ನು ಮಾತ್ರ ಭಾರತೀಯ ವಾಯಪಡೆ ನೀಡುತ್ತದೆ.

ADVERTISEMENT

ಸಂಸ್ಥೆಯ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲ ಪ್ರಮುಖರೂ ಈ ಕಾರ್ಯದಲ್ಲಿ ತೊಡಗುವುದರಿಂದ ಎಲ್ಲ ವಿಭಾಗಗಳಲ್ಲಿ ಉತ್ಪಾದನೆಯ ವೇಗಕ್ಕೆ ಕಡಿವಾಣ ಬೀಳುತ್ತದೆ. ಸರಿ ಸುಮಾರು ಆಗಸ್ಟ್‌– ಸೆಪ್ಟಂಬರ್‌ನಿಂದಲೇ ಏರೋಇಂಡಿಯಾ ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಲಾಗುತ್ತದೆ. ಆರ್ಥಿಕ ವರ್ಷದ ಕೊನೆ ಅವಧಿ ಕೊನೆಗೊಳ್ಳುವುದೂ ಇದೇ ಸಮಯದಲ್ಲಿ. ನಿಗದಿತ ಗುರಿಯನ್ನು ತಲುಪಬೇಕಾದ ಒತ್ತಡವೂ ಇರುತ್ತದೆ. ಏರೋ ಇಂಡಿಯಾ ಪ್ರದರ್ಶನದಿಂದ ಗುರಿ ತಲುಪುವುದು ಕಷ್ಟವಾಗುತ್ತಿದೆ ಎಂಬುದು ಅವರ ವಿವರಣೆ.

ದೇಶದ ಹೆಮ್ಮೆಯ ಎಲ್‌ಸಿಎ (ತೇಜಸ್‌), ಎಚ್‌ಟಿಟಿ–40(ತರಬೇತಿ ವಿಮಾನ), ದೇಶೀಯವಾಗಿ ಪ್ರಥಮ ಬಾರಿಗೆ ಮೇಲ್ದರ್ಜೆಗೇರಿಸಲ್ಪಟ್ಟ ಹಾಕ್‌ ಎಂಕೆ 132, ಸಿವಿಲ್‌ ಡು–228, ಎಎಲ್‌ಎಚ್‌(ರುದ್ರ), ಎಲ್‌ಯುಎಚ್‌, ಎಲ್‌ಸಿಎಚ್‌ ಮುಂತಾದವುಗಳ ಸಾಮರ್ಥ್ಯವನ್ನು ಪ್ರದರ್ಶಿಸಿ ಅಂತರರಾಷ್ಟ್ರೀಯ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಎಚ್‌ಎಎಲ್‌ ಮಾಡಿದೆ. ‘ಇಂತಹ ಪ್ರತಿಷ್ಠಿತ ಪ್ರದರ್ಶನ ಆಚರಿಸುವುದು ಹೆಮ್ಮೆಯ ವಿಚಾರವೇ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಎಚ್‌ಎಎಲ್‌ ನಾಯಕನಾಗಿ ಬೆಳೆಯಲು ಏರೋ ಇಂಡಿಯಾ’ ಪ್ರಮುಖ ವೇದಿಕೆಯಾಗಿದೆ ಎಂದು ಎಚ್‌ಎಎಲ್‌ ಅಧ್ಯಕ್ಷ ಮಾಧವನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.