ADVERTISEMENT

ನೀಟ್‌ನಿಂದ ಗ್ರಾಮೀಣ ಭಾಗದವರಿಗೆ ಅವಕಾಶ ವಂಚನೆ: ಡಾ.ಸಿ.ಎನ್. ಮಂಜುನಾಥ್

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಕಳವಳ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 15:22 IST
Last Updated 1 ಜೂನ್ 2022, 15:22 IST
ಡಾ.ಸಿ.ಎನ್. ಮಂಜುನಾಥ್ ಹಾಗೂ ಡಾ.ಎಂ.ಕೆ. ರಮೇಶ್ ಚರ್ಚಿಸಿದರು – ಪ್ರಜಾವಾಣಿ ಚಿತ್ರ
ಡಾ.ಸಿ.ಎನ್. ಮಂಜುನಾಥ್ ಹಾಗೂ ಡಾ.ಎಂ.ಕೆ. ರಮೇಶ್ ಚರ್ಚಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸ್ನಾತಕೋತ್ತರ ವೈದ್ಯಕೀಯಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿನ (ನೀಟ್‌) ಲೋಪದಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಗರದಲ್ಲಿ ಬುಧವಾರ ಹಮ್ಮಿಕೊಂಡ 27ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ನೀಟ್ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸಲುವೈದ್ಯಕೀಯ ಮತ್ತು ಆರೋಗ್ಯ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.

‘ಗ್ರಾಮೀಣ ಮತ್ತು ಉಪನಗರ ಪ್ರದೇಶಗಳ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 99ರಷ್ಟು ಅಂಕ ಗಳಿಸಿರುತ್ತಾರೆ. ಆದರೆ, ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದರೆ ಅವಕಾಶ ವಂಚಿತರಾಗುತ್ತಾರೆ. ಆದ್ದರಿಂದ, ಈಗಿರುವ ವ್ಯವಸ್ಥೆ ಸರಿಪಡಿಸಬೇಕಾಗಿದೆ’ ಎಂದರು.

ADVERTISEMENT

ಪ್ರೋತ್ಸಾಹಧನ ನೀಡಿ: ‘ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಪ್ರೋತ್ಸಾಹಧನ ನೀಡಬೇಕು. ಜಯದೇವ ಸಂಸ್ಥೆಯಲ್ಲಿ ಸಿಬ್ಬಂದಿಗೆ ಆಂತರಿಕ ಸಂಪನ್ಮೂಲದಿಂದಲೇ ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು.

‘ಒಂದೂವರೆ ದಶಕದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಶೇ 500 ರಷ್ಟು ಪ್ರಗತಿ ಸಾಧಿಸಿದೆ.ಸಂಸ್ಥೆಯಲ್ಲಿ 105 ಹೃದ್ರೋಗ ತಜ್ಞರು ಹಾಗೂ 50 ಹೃದಯ ಶಸ್ತ್ರಚಿಕಿತ್ಸಕರಿದ್ದು, ಇಷ್ಟೊಂದು ತಜ್ಞರಿರುವ ಜಗತ್ತಿನ ಏಕೈಕ ಸಂಸ್ಥೆ ಇದಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ಮಾಜಿ ಕುಲಪತಿ ಡಾ. ಸಚ್ಚಿದಾನಂದ, ಕುಲಸಚಿವರಾದ ಡಾ.ಎನ್. ರಾಮಕೃಷ್ಣ ರೆಡ್ಡಿ, ಎಂ.ಆರ್. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.