ADVERTISEMENT

ಎನ್‌ಟಿಟಿಎಫ್‌ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಶಿಷ್ಯವೃತ್ತಿಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 16:29 IST
Last Updated 28 ಆಗಸ್ಟ್ 2024, 16:29 IST
ಎನ್‍ಟಿಟಿಎಫ್‌ ತರಬೇತಿ ಕೇಂದ್ರದಲ್ಲಿ ಬುಧವಾರ ಆರಂಭವಾದ ಜರ್ಮನ್‌ ಅಸ್ಬಿಲ್ಡಂಗ್‌ (ತರಬೇತಿ) ಕಾರ್ಯಕ್ರಮದಲ್ಲಿ ಜರ್ಮನ್‌ ದೂತವಾಸದ ಅಧಿಕಾರಿಗಳು ಮತ್ತು ಎನ್‌ಟಿಟಿಎಫ್‌ ಮುಖ್ಯಸ್ಥರು ಭಾಗವಹಿಸಿದ್ದರು
ಎನ್‍ಟಿಟಿಎಫ್‌ ತರಬೇತಿ ಕೇಂದ್ರದಲ್ಲಿ ಬುಧವಾರ ಆರಂಭವಾದ ಜರ್ಮನ್‌ ಅಸ್ಬಿಲ್ಡಂಗ್‌ (ತರಬೇತಿ) ಕಾರ್ಯಕ್ರಮದಲ್ಲಿ ಜರ್ಮನ್‌ ದೂತವಾಸದ ಅಧಿಕಾರಿಗಳು ಮತ್ತು ಎನ್‌ಟಿಟಿಎಫ್‌ ಮುಖ್ಯಸ್ಥರು ಭಾಗವಹಿಸಿದ್ದರು   

ಬೆಂಗಳೂರು: ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ದೀರ್ಘಾವಧಿ ಅಪ್ರೆಂಟಿಸ್‌ಶಿಪ್‌ (ಶಿಷ್ಯವೃತ್ತಿ) ಮಾಡಲು ನೆಟ್ಟೂರ್ ಟೆಕ್ನಿಕಲ್ ಟ್ರೈನಿಂಗ್ ಫೌಂಡೇಷನ್ (ಎನ್‍ಟಿಟಿಎಫ್) ಮ್ಯಾಜಿಕ್ ಬಿಲಿಯನ್ ಮತ್ತು ಐಎಚ್‍ಕೆ–ಜರ್ಮನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಎನ್‍ಟಿಟಿಎಫ್‌ ತರಬೇತಿ ಕೇಂದ್ರದಲ್ಲಿ ಜರ್ಮನ್‌ ಅಸ್ಬಿಲ್ಡಂಗ್‌ (ತರಬೇತಿ) ಕಾರ್ಯಕ್ರಮವನ್ನು ಬುಧವಾರ ಬೆಂಗಳೂರಿನಲ್ಲಿ ಜರ್ಮನಿಯ ಡೆಪ್ಯೂಟಿ ಕಾನ್ಸುಲರ್ ಎಂ.ಎಸ್. ಆನೆಟ್ ಬೇಸ್ಲರ್ ಉದ್ಘಾಟಿಸಿದರು.

ಅಪ್ರೆಂಟಿಸ್‍ಶಿಪ್‍ಗಿಂತ ಹೆಚ್ಚಾಗಿ ಇದು ವಿಶ್ವ ದರ್ಜೆಯ ಶಿಕ್ಷಣ ಮತ್ತು ಅತ್ಯಾಧುನಿಕ ಜರ್ಮನ್ ಕೈಗಾರಿಕೆಗಳಲ್ಲಿ ವೃತ್ತಿಜೀವನದ ಪ್ರವೇಶಾವಕಾಶ ಕಲ್ಪಿಸುವ ವೇದಿಕೆ ಎಂದು ಆನೆಟ್ ಬೇಸ್ಲರ್ ತಿಳಿಸಿದರು.

ADVERTISEMENT

ಅಪ್ರೆಂಟಿಸ್‌ಗಳು ಜರ್ಮನ್ ಕಂಪನಿಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಆಟೋಮೋಟಿವ್ ಮೆಕಾಟ್ರಾನಿಕ್ಸ್, ಪ್ಲಾಂಟ್ ಮೆಕ್ಯಾನಿಕ್ಸ್, ಎಲೆಕ್ಟ್ರಾನಿಕ್ಸ್, ಕಾರ್ ಟೆಕ್ನಾಲಜಿ ಮತ್ತು ಕಟ್ಟಿಂಗ್‌ ಮಷಿನ್ ಟೆಕ್ನಾಲಜಿಯಂತಹ ಬೇಡಿಕೆಯ ಕ್ಷೇತ್ರಗಳಲ್ಲಿ ಕೌಶಲ ಕರಗತ ಮಾಡಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಎನ್‌ಟಿಟಿಎಫ್‌ನ 100 ವಿದ್ಯಾರ್ಥಿಗಳನ್ನು ಈ ತರಬೇತಿಗೆ ಪಟ್ಟಿ ಮಾಡಲಾಗಿದೆ. ಅದರಲ್ಲಿ 70 ವಿದ್ಯಾರ್ಥಿಗಳಿಗೆ ಜರ್ಮನ್‌ ಕಂಪನಿಗಳಿಂದ ಆಹ್ವಾನ ಬಂದಿದೆ. ಹತ್ತು ತಿಂಗಳು ಇಲ್ಲಿನ ಕ್ಯಾಂಪಸ್‌ನಲ್ಲಿ ಎ1, ಎ2 ಮತ್ತು ಬಿ1 ಹಂತದ ತರಬೇತಿ ನೀಡಲಾಗುತ್ತದೆ. ಅಷ್ಟು ಹೊತ್ತಿಗೆ ವಿದ್ಯಾರ್ಥಿಗಳು ಜರ್ಮನ್‌ ಭಾಷೆ ಮತ್ತು ಸಂಸ್ಕೃತಿಯಲ್ಲಿ  ಪರಿಣತಿ ಸಾಧಿಸಿರುತ್ತಾರೆ. ಇದೇ ಸಮಯದಲ್ಲಿ  ಎಲ್ಲ ದಾಖಲೆಗಳು ಮತ್ತು ವೀಸಾ ಸಿದ್ಧಪಡಿಸಲಾಗುತ್ತದೆ. 2025ರ ಜೂನ್‌ನಿಂದ ಸೆಪ್ಟೆಂಬರ್‌ ಒಳಗೆ ಜರ್ಮನಿಗೆ ತೆರಳಲಿದ್ದಾರೆ ಎಂದು ಎನ್‍ಟಿಟಿಎಫ್ ಮುಖ್ಯಸ್ಥರಾದ ಆರ್. ರಾಜಗೋಪಾಲನ್, ಬಿ.ವಿ. ಸುದರ್ಶನ್ ಮಾಹಿತಿ ನೀಡಿದರು.

ಮೂರರಿಂದ ಮೂರೂವರೆ ವರ್ಷಗಳ ಈ ಅಪ್ರೆಂಟಿಸ್‌ಶಿಪ್‌ ಅವಧಿಯಲ್ಲಿ ತಿಂಗಳಿಗೆ 1500 ಯೂರೊವರೆಗೆ (ಸುಮಾರು ₹ 1.40 ಲಕ್ಷ) ಶಿಷ್ಯವೇತನ ನೀಡಲಾಗುತ್ತದೆ. 2100 ಯೂರೊ (₹ 1.95 ಲಕ್ಷ) ಕನಿಷ್ಠ ವೇತನದ ಖಾತ್ರಿಯೊಂದಿಗೆ ಯೂರೋಪ್‌ನಲ್ಲಿ ವೃತ್ತಿಜೀವನ ಆರಂಭಿಸುವ ಅವಕಾಶ ಸಿಗಲಿದೆ ಎಂದು ತಿಳಿಸಿದರು.

ನೋಯ್ಡಾದ ಮ್ಯಾಜಿಕ್ ಬಿಲಿಯನ್ ಸಂಸ್ಥಾಪಕ ಬಸಾಬ್ ಬ್ಯಾನರ್ಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.