ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ಜನರಿಗೆ ಜಿಕೆವಿಕೆ ಆವರಣದಲ್ಲಿರುವ ಹಸಿರು ಪರಿಸರ, ವಿಭಿನ್ನ ಜಾತಿಯ ಗಿಡ–ಮರಗಳು, ಪ್ರಾಣಿ, ಪಕ್ಷಿ ಸಂಕುಲಗಳನ್ನು ಸಾರ್ವಜನಿಕರಿಗೆ ಪರಿಚಯಿಸುವುದು. ಅದರ ಜೊತೆಗೆ ಕೃಷಿ ಮತ್ತು ಪರಿಸರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಕೃಷಿ ಪರಿಸರದ ಕಡೆಗೆ ನಮ್ಮ ನಡಿಗೆ’ ಎಂಬ ಮಾರ್ಗದರ್ಶಿ ಪ್ರವಾಸ ಪ್ರಾರಂಭಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ.
ಜಿಕೆವಿಕೆ ಆವರಣವು 1,320 ಎಕರೆ ಪ್ರದೇಶ ಹೊಂದಿದೆ. ಇಲ್ಲಿ ಸಾವಿರಾರು ಸಸ್ಯ ಪ್ರಭೇದಗಳು, ವೈವಿಧ್ಯಮಯ ಕೃಷಿ ಬೆಳೆಗಳಿವೆ. ಇದು ಜೀವವೈವಿಧ್ಯದ ತಾಣವಾಗಿದೆ. ನಗರದ ಒತ್ತಡದ ಬದುಕು, ಸಂಚಾರ ದಟ್ಟಣೆ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದಂತಹ ಸಮಸ್ಯೆಗಳನ್ನು ಮರೆತು ಈ ಹಸಿರು ಪರಿಸರದಲ್ಲಿ ನಡಿಗೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗಿಡ–ಮರಗಳು ಹಾಗೂ ಕೃಷಿಯ ಬಗ್ಗೆ ಕುತೂಹಲ ಇರುವವರು, ಜೀವ ವೈವಿಧ್ಯ ಅಧ್ಯಯನಕಾರರು, ವಿದ್ಯಾರ್ಥಿಗಳು, ನಗರವಾಸಿಗಳು ಸೇರಿ ಸಾರ್ವಜನಿಕರು ಈ ನಡಿಗೆಯಲ್ಲಿ ಭಾಗವಹಿಸಬಹುದು.
‘ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಸೆ.27ರಂದು ಪರಿಸರದ ಕಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಬೆಳಿಗ್ಗೆ 6ರಿಂದ 10.30ರವರೆಗೆ ಈ ನಡಿಗೆ ನಡೆಯಲಿದೆ. ಇದರಲ್ಲಿ ಭಾಗವಹಿಸುವವರಿಗೆ ಇಲ್ಲಿನ ಗಿಡ–ಮರಗಳು ಸೇರಿ ಕೃಷಿ ಬೆಳೆಗಳ ಪರಿಚಯ, ಅವುಗಳನ್ನು ಬೆಳೆಯುವ ವಿಧಾನ ಮುಂತಾದ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಈ ನಡಿಗೆಯಲ್ಲಿ 200 ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್ ತಿಳಿಸಿದರು.
‘ಪರಿಸರದ ನಡಿಗೆಯಲ್ಲಿ ಪ್ರಕೃತಿ ಸೊಬಗಿನ ಜೊತೆಗೆ ಕೃಷಿ ಬೆಳೆಗಳು, ಕೃಷಿ ವಸ್ತು ಸಂಗ್ರಹಾಲಯ, ಮಧುವನ, ಪಶುಸಂಗೋಪನೆ, ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ, ಜಲ ಕೃಷಿಯ ಕುರಿತು ನುರಿತ ತಜ್ಞರು ಸ್ಥಳದಲ್ಲಿಯೇ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ರಾಷ್ಟ್ರದ ಪ್ರಮುಖ 12 ಸಸ್ಯ ಉದ್ಯಾನಗಳಲ್ಲಿ ಒಂದಾದ ಮಹಾತ್ಮ ಗಾಂಧಿ ಸಸ್ಯ ಉದ್ಯಾನಕ್ಕೂ ಭೇಟಿ ನೀಡಬಹುದು. ಎತ್ತಿನ ಬಂಡಿಯ ಸವಾರಿಯನ್ನು ಮಾಡುವ ಅವಕಾಶ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.
₹200 ಶುಲ್ಕ ನಿಗದಿ
ಪರಿಸರದ ಕಡೆಗೆ ನಮ್ಮ ನಡಿಗೆಯಲ್ಲಿ ಪಾಲ್ಗೊಳ್ಳಲು ₹200 ಶುಲ್ಕ ನಿಗದಿಪಡಿಸಲಾಗಿದ್ದು 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ನಡಿಗೆ ಮುಗಿದ ನಂತರ ಸಿರಿಧಾನ್ಯಗಳಿಂದ ತಯಾರಿಸಿದ ಲಘು ಉಪಾಹಾರದ ವ್ಯವಸ್ಥೆ ಇರಲಿದೆ. ಆಸಕ್ತರು ಇದೇ 25ರೊಳಗೆ https://forms.gle/jE4vzh5GDiM4pEk59 ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 63604 66004 94822 30588ಗೆ ಸಂಪರ್ಕಿಸಬಹುದು.
‘ಕೃಷಿ ಕುರಿತು ಆಸಕ್ತಿ ಮೂಡಿಸುವ ಉದ್ದೇಶ’
ನಗರ ಪ್ರದೇಶದಲ್ಲಿರುವ ಜನರಿಗೆ ಕೃಷಿ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಪ್ರಕೃತಿಯ ಜೊತೆಗೆ ಒಡನಾಟ ಹೆಚ್ಚಿಸುವ ಉದ್ದೇಶದಿಂದ ಪರಿಸರದ ಕಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತಿಂಗಳಿಗೆ ಒಂದು ಬಾರಿ ಈ ನಡಿಗೆ ಆಯೋಜಿಸಲಾಗುತ್ತದೆ. ಇದರ ಜೊತೆಗೆ ಜಿಕೆವಿಕೆ ಆವರಣದಲ್ಲಿ ಐದು ಕಿ.ಮೀ ನಡಿಗೆ ಇರಲಿದೆ. ಕೃಷಿ ಸಂತೆ ಇರಲಿದ್ದು ಆಸಕ್ತರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು ಎಂದು ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.