ADVERTISEMENT

ಬೆಂಗಳೂರು: ಎಐ ಭಗವದ್ಗೀತೆ & ಟೆಕ್‌ವೈದ್ಯ ಗ್ಲೋಬಲ್ ಪೋರ್ಟಲ್ ಲೋಕಾರ್ಪಣೆ

ಕನ್ನಡ ತಂತ್ರಜ್ಞಾನ ಲೋಕಕ್ಕೆ ಹೊಸ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 16:39 IST
Last Updated 2 ಫೆಬ್ರುವರಿ 2026, 16:39 IST
   

ಬೆಂಗಳೂರು: ನಗರದ ಪ್ರತಿಷ್ಠಿತ ಉದಯಭಾನು ಕಲಾಸಂಘದಲ್ಲಿ ಟೆಕ್‌ವೈದ್ಯ ಗ್ಲೋಬಲ್ ವೆಬ್ ಪೋರ್ಟಲ್ ಹಾಗೂ ಎಐ ಭಗವದ್ಗೀತೆ ಕೃತಿಯ ಲೋಕಾರ್ಪಣೆ ಸಮಾರಂಭವು ತಂತ್ರಜ್ಞಾನ ಆಸಕ್ತರು ಮತ್ತು ಸಾಹಿತ್ಯ ಪ್ರೇಮಿಗಳ ಸಮ್ಮುಖದಲ್ಲಿ ಭಾನುವಾರ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಎಐ ತಂತ್ರಜ್ಞಾನವು ಇಂದು ನಮ್ಮನ್ನು ಆವರಿಸಿರುವ ಬಗೆ, ಅದನ್ನು ನಾವು ಸ್ವೀಕರಿಸಬೇಕಾದ ಅನಿವಾರ್ಯತೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಗಣ್ಯರು ಅಭಿಪ್ರಾಯ ಮಂಡಿಸಿದರು.

ಕನ್ನಡದ ತಂತ್ರಜ್ಞಾನ ಲೋಕದಲ್ಲಿ ಹೊಸ ಮೈಲಿಗಲ್ಲಾಗುವ ನಿರೀಕ್ಷೆ ಮೂಡಿಸಿರುವ ಟೆಕ್‌ವೈದ್ಯ ಗ್ಲೋಬಲ್ ವೆಬ್ ಪೋರ್ಟಲ್ ಹಾಗೂ ಪತ್ರಕರ್ತ ನಾಗರಾಜ ವೈದ್ಯ ಅವರು ರಚಿಸಿರುವ ಎಐ ಭಗವದ್ಗೀತೆ ಕೃತಿಯ ಲೋಕಾರ್ಪಣೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ತಂತ್ರಜ್ಞಾನವು ಕೇವಲ ಇಂಜಿನಿಯರ್‌ಗಳಿಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗವಾಗಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಕಾರ್ಯಕ್ರಮವು ಸಾರಿ ಹೇಳಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೀ ಕನ್ನಡ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ಸುಧೀಂದ್ರ ಭಾರದ್ವಾಜ್ ಅವರು ಮಾತನಾಡಿ, ಎಐ ಎನ್ನುವುದು ಇವತ್ತು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿರುವ ಒಂದು ಮಾಯೆ. ನಾವು ಎಷ್ಟೇ ಪ್ರಯತ್ನಿಸಿದರೂ ಈ ಮಾಯೆಯಿಂದ ತಪ್ಪಿಸಿಕೊಳ್ಳಲು ಅಥವಾ ಇದನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೇವೆ. ಹೀಗಿರುವಾಗ ಇದನ್ನು ವಿರೋಧಿಸುವ ಬದಲು, ಇದರ ಸ್ವರೂಪವನ್ನು ಅರಿತು ಅಳವಡಿಸಿಕೊಳ್ಳುವುದೇ ಜಾಣತನ. ಎಐ ಬಗ್ಗೆ ಕಲಿಯಲು ನಾಗರಾಜ ವೈದ್ಯರ ಎಐ ಭಗವದ್ಗೀತೆ ಕೃತಿಯು ಉತ್ತಮ ಪ್ರವೇಶಿಕೆಯಾಗಿದೆ ಎಂದು ಶ್ಲಾಘಿಸಿದರು.

ADVERTISEMENT

ಮತ್ತೋರ್ವ ಅತಿಥಿ, ಖ್ಯಾತ ಲೇಖಕ ಹಾಗೂ ವಾಗ್ಮಿ ರೋಹಿತ್ ಚಕ್ರತೀರ್ಥ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ದಿನದಿಂದ ದಿನಕ್ಕೆ ಅಗಾಧವಾಗಿ ಬೆಳೆಯುತ್ತಿದೆ. ಮಾನವನ ಅಗತ್ಯಗಳನ್ನು ಪೂರೈಸುವಲ್ಲಿ ಮತ್ತು ನಮಗೆ ಬೇಕಾದ್ದನ್ನು ಮತ್ತಷ್ಟು ತ್ವರಿತವಾಗಿ ನೀಡುವಲ್ಲಿ ಅದು ಸಫಲವಾಗುತ್ತಿದೆ. ಆದರೆ ವಿಪರ್ಯಾಸವೆಂದರೆ, ತಂತ್ರಜ್ಞಾನ ಇಷ್ಟೊಂದು ವೇಗವಾಗಿ ಮುನ್ನಡೆಯುತ್ತಿರುವಾಗ, ನಾವು ನಮ್ಮ ಶಾಲೆಗಳಲ್ಲಿ ಇನ್ನೂ ಹಳೆಯ ಕಾಲದ ಪಠ್ಯಗಳನ್ನೇ ಬೋಧಿಸುತ್ತಿದ್ದೇವೆ. ಇಂದಿನ ಡಿಜಿಟಲ್ ಯುಗಕ್ಕೆ ಅಪ್ರಸ್ತುತವಾಗಿರುವ ವಿಷಯಗಳನ್ನು ಮಕ್ಕಳಿಗೆ ಕಲಿಸುವ ಪದ್ಧತಿ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಖ್ಯಾತ ಧ್ವನಿಕಲಾವಿದ ಮತ್ತು ನಟ ಪ್ರದೀಪ್ ಬಡೆಕ್ಕಿಲ ಮಾತನಾಡಿ, ಸಾಮಾನ್ಯವಾಗಿ ಎಐ ಬಂದರೆ ಮನುಷ್ಯರ ಕೆಲಸಗಳು ಹೋಗುತ್ತವೆ ಎಂಬ ಭೀತಿ ಎಲ್ಲೆಡೆ ಇದೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ತಂತ್ರಜ್ಞಾನ ಎಂಬುದು ಒಂದು ಆಯುಧವಿದ್ದಂತೆ, ಅದನ್ನು ಸರಿಯಾಗಿ ಬಳಸುವ ಕಲೆ ನಮಗೆ ಸಿದ್ಧಿಸಬೇಕು. ಎಐ ಅನ್ನು ನಾವು ಪಳಗಿಸಿಕೊಂಡು, ನಮ್ಮ ಕೆಲಸಗಳಿಗೆ ಹೇಗೆ ಸಮರ್ಥವಾಗಿ ದುಡಿಸಿಕೊಳ್ಳಬಹುದು ಎಂಬುದನ್ನು ಕಲಿಯುವುದರಲ್ಲೇ ನಮ್ಮ ಗೆಲುವಿದೆ ಎಂದು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.

ಪ್ರವಾಸೀ ಪ್ರಪಂಚದ ಕಾರ್ಯ ನಿರ್ವಾಹಕ ಸಂಪಾದಕರಾದ ನವೀನ್ ಸಾಗರ್ ಅವರು ಮಾತನಾಡಿ, ಇಂದಿನ ಸಂಕೀರ್ಣ ಜನಜೀವನದಲ್ಲಿ ತಂತ್ರಜ್ಞಾನದ ತಿಳಿವಳಿಕೆ ಅತ್ಯಗತ್ಯ. ನಾಗರಾಜ ವೈದ್ಯ ಅವರು ಎಐ ಭಗವದ್ಗೀತೆ ಮತ್ತು ಟೆಕ್‌ವೈದ್ಯ ಪೋರ್ಟಲ್ ಮೂಲಕ ತಂತ್ರಜ್ಞಾನವನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ. ಜಗತ್ತಿನ ಆಗುಹೋಗುಗಳನ್ನು ಅರ್ಥ ಮಾಡಿಕೊಳ್ಳಲು ಇವು ದಿಕ್ಸೂಚಿಯಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಐ ಭಗವದ್ಗೀತೆ ಕೃತಿಕಾರ ಮತ್ತು ಟೆಕ್‌ವೈದ್ಯ ಗ್ಲೋಬಲ್‌ನ ಸಂಪಾದಕ ನಾಗರಾಜ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಅನೇಕ ಕಡೆ ಕೇವಲ ಕಂಪನಿಗಳು ನೀಡುವ ಪ್ರೆಸ್ ರಿಲೀಸ್ ಅಥವಾ ಪತ್ರಿಕಾ ಪ್ರಕಟಣೆಗಳನ್ನು ಯಥಾವತ್ತಾಗಿ ಪ್ರಕಟಿಸುವುದನ್ನೇ ಟೆಕ್ ಜರ್ನಲಿಸಂ ಎಂದು ಬಿಂಬಿಸಲಾಗುತ್ತಿದೆ. ಆದರೆ ತಂತ್ರಜ್ಞಾನ ಪತ್ರಿಕೋದ್ಯಮದ ವ್ಯಾಪ್ತಿ ಅದಕ್ಕಿಂತ ಹಿರಿದಾದುದು. ಜನರಿಗೆ ಕೇವಲ ಮಾಹಿತಿ ನೀಡದೆ, ಆಳವಾದ ಜ್ಞಾನ ಮತ್ತು ವಿಶ್ಲೇಷಣೆಯನ್ನು ನೀಡುವ ಉದ್ದೇಶದಿಂದ ಟೆಕ್‌ವೈದ್ಯ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಎಐ ಕೇವಲ ಐಟಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಲ್ಲ, ಅದು ಪ್ರತಿಯೊಬ್ಬರ ಬದುಕನ್ನು ಪ್ರಭಾವಿಸುತ್ತಿದೆ. ಈ ಬದಲಾವಣೆಯನ್ನು ಅರ್ಥಮಾಡಿಸಲು ಈ ಕೃತಿ ಸಹಕಾರಿ ಎಂದರು.

ಸಿಂಧು ವೈದ್ಯ ನಿರೂಪಣೆ ಮಾಡಿದರು. ಕೃಷ್ಣ ಸುಬ್ರಹ್ಮಣ್ಯ ದೀಕ್ಷಿತ್ ಸ್ವಾಗತಿಸಿದರು. ಚೈತ್ರಿಕಾ ವೈದ್ಯ ಪ್ರಾರ್ಥನೆ ಸಲ್ಲಿಸಿದರು. ವಿನಾಯಕ ಮಾನಿಗದ್ದೆ ವಂದನಾರ್ಪಣೆ ಮಾಡಿದರು. ಎಐ ಭಗವದ್ಗೀತೆ ಕೃತಿಯ ಪ್ರತಿಗಳು ಬೇಕಿದ್ದಲ್ಲಿ ಆಸಕ್ತರು 7019438530 ಸಂಖ್ಯೆಯನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.