
ಬೆಂಗಳೂರು: ಕೃತಕ ಬುದ್ಧಿಮತ್ತೆ ಆಧರಿಸಿದ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಶೋಧನೆಗಳು ಶೃಂಗಸಭೆಯ ವಸ್ತು ಪ್ರದರ್ಶನದಲ್ಲಿ ಒಂದೇ ಸೂರಿನಡಿ ಲಭ್ಯ ಇವೆ.
ಟೆಕ್ ಶೃಂಗದ ವಸ್ತುಪ್ರದರ್ಶನದಲ್ಲಿ ಮೂರು ಸಭಾಂಗಣದಲ್ಲಿ ಸಾವಿರಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ನವೋದ್ಯಮಗಳು, ಕೈಗಾರಿಕೆ, ಹೊಸ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಅಂತರರಾಷ್ಟ್ರೀಯ ಉಪಕರಣಗಳ ಪ್ರದರ್ಶನ ಮಳಿಗೆಗೆ ಗಣ್ಯರು, ವಿದ್ಯಾರ್ಥಿಗಳು, ಯುವಜನರು, ಆಸಕ್ತರು, ಉದ್ಯಮಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೇಂದ್ರದ ಆವರಣದಲ್ಲಿ ತಂತ್ರಜ್ಞಾನ ಆಧಾರಿತ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಭಾರತ, ಅಮೆರಿಕ, ಜಪಾನ್, ಇಸ್ರೇಲ್ ಸೇರಿದಂತೆ ಹಲವು ದೇಶಗಳ ತಂತ್ರಜ್ಞಾನ ಕಂಪನಿಗಳು ತಮ್ಮ ತಂತ್ರಜ್ಞಾನದ ಮಾದರಿಗಳನ್ನು ಪ್ರದರ್ಶಿಸುತ್ತಿವೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕುತೂಹಲ ತಣಿಸಿಕೊಂಡರು.
ಟೆಕ್ ಶೃಂಗ ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಅವರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಹೊಸ ಆವಿಷ್ಕಾರಗಳ ಕುರಿತು ಮಾಹಿತಿ ಪಡೆದುಕೊಂಡರು.
ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ), ಇನ್ವೆಸ್ಟ್ ಕರ್ನಾಟಕ ಫೋರಂ ಮಳಿಗೆಗಳಿಗೆ ಸಚಿವ ಎಂ. ಬಿ. ಪಾಟೀಲ ಭೇಟಿ ನೀಡಿ ವೀಕ್ಷಿಸಿದರು. ಭಾರತೀಯ ದೂರವಾಣಿ ಕಾರ್ಖಾನೆ (ಐಟಿಐ), ಎಸ್‌ಬಿಐ ಮುಂತಾದ ಮಳಿಗೆಗಳಿಗೂ ಭೇಟಿ ನೀಡಿ, ಅಲ್ಲಿಯ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಂಡರು.
ಐಟಿಐ ಅಭಿವೃದ್ಧಿಪಡಿಸಿರುವ ಉತ್ಕೃಷ್ಟ ಗುಣಮಟ್ಟದ ವೈರ್ ಲೆಸ್ ಸೆಟ್ ನೋಡಿ ಅವುಗಳ ಮೂಲಕ ಸಂವಹನ ಕೂಡ ನಡೆಸಿದರು. ಹಾಗೆಯೇ ಐಟಿಐ ತಯಾರಿಸಿರುವ ಡ್ರೋನ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.