ADVERTISEMENT

ಬೆಂಗಳೂರು| ಸಂಚಾರ ನಿಮಯ ಉಲ್ಲಂಘನೆ: ದಂಡದ ಮೊತ್ತ ತೋರುವ ಎಐ ಆಧಾರಿತ ಬಿಲ್‌ ಬೋರ್ಡ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 15:24 IST
Last Updated 27 ಸೆಪ್ಟೆಂಬರ್ 2025, 15:24 IST
<div class="paragraphs"><p>ಟ್ರಿನಿಟಿ ವೃತ್ತದಲ್ಲಿ ಅಳವಡಿಸಿರುವ ಬಿಲ್‌ ಬೋರ್ಡ್‌ </p></div>

ಟ್ರಿನಿಟಿ ವೃತ್ತದಲ್ಲಿ ಅಳವಡಿಸಿರುವ ಬಿಲ್‌ ಬೋರ್ಡ್‌

   

ಪ್ರಜಾವಾಣಿ ಚಿತ್ರ - ಪುಷ್ಕರ್‌ ವಿ. 

ಬೆಂಗಳೂರು: ನಗರದ ಟ್ರಿನಿಟಿ ವೃತ್ತ ಸೇರಿ ಎರಡು ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಬಿಲ್‌ ಬೋರ್ಡ್‌’ ಅನ್ನು ನಗರ ಸಂಚಾರ ವಿಭಾಗದ ಪೊಲೀಸರು ಅಳವಡಿಸಿದ್ದಾರೆ. ಈ ವೃತ್ತದ ಮೂಲಕ ಸಾಗುವಾಗ ‘ಬಿಲ್‌ ಬೋರ್ಡ್‌’ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ದಂಡದ ಮೊತ್ತವನ್ನು ಪ್ರದರ್ಶಿಸಲಿದೆ.  

ADVERTISEMENT

ದಟ್ಟಣೆ ಸಮಸ್ಯೆ ಪರಿಹರಿಸಲು ನಗರ ಸಂಚಾರ ಪೊಲೀಸರು ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ನಗರದ ಹಲವು ಕಡೆ ಅಳವಡಿಸಿರುವ ಎ.ಐ ಆಧಾರಿತ ಕ್ಯಾಮೆರಾಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದ್ದರೆ, ಟ್ರಿನಿಟಿ ವೃತ್ತದಲ್ಲಿ ಅಳವಡಿಸಿರುವ ಹೊಸ ಬಿಲ್‍ ಬೋರ್ಡ್​, ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡದ ಮಾಹಿತಿಯನ್ನು ಪ್ರದರ್ಶಿಸಲಿದೆ.

ನಗರ ಪೊಲೀಸ್ ಇಲಾಖೆ ಹಾಗೂ ‘ಕಾರ್ಸ್ 24’ ಸಹಯೋಗದಲ್ಲಿ ಟ್ರಿನಿಟಿ ವೃತ್ತದಲ್ಲಿ ಎ.ಐ ಆಧಾರಿತ ಡಿಜಿಟಲ್ ಜಾಹೀರಾತು ಫಲಕವನ್ನು ಅಳವಡಿಸಿದೆ. ಈ ವೃತ್ತದಿಂದ ಹಾದುಹೋಗುವ ವಾಹನಗಳ ಸಂಚಾರ ಉಲ್ಲಂಘನೆ ಸೇರಿದಂತೆ ಬಾಕಿ ದಂಡದ ಮಾಹಿತಿಯನ್ನು ಈ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ಬಿಲ್‍ಬೋರ್ಡ್ ಅತ್ಯಾಧುನಿಕ ಎ.ಐ ಆಧಾರಿತ ಕ್ಯಾಮೆರಾಗಳನ್ನು ಹೊಂದಿದ್ದು, ನೂರು ಮೀಟರ್​​​ ದೂರದಿಂದಲೇ ವಾಹನಗಳ ನೋಂದಣಿ ಸಂಖ್ಯೆ ಸ್ಕ್ಯಾನ್ ಮಾಡುತ್ತದೆ. ಬಾಕಿ ಇರುವ ಇ-ಚಲನ್‌ ಆಗಿರಬಹುದು, ಅವಧಿ ಮೀರಿದ ಮಾಲಿನ್ಯ ನಿಯಂತ್ರಣ (ಪಿಯುಸಿಸಿ) ಪ್ರಮಾಣಪತ್ರ ಅಥವಾ ಇತರ ಸಂಚಾರ ನಿಮಯ ಉಲ್ಲಂಘನೆಗಳನ್ನು ನೇರವಾಗಿ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.

‘ಸದ್ಯ ಎರಡು ಜಂಕ್ಷನ್‌ನಲ್ಲಿ ಮಾತ್ರ ಬಿಲ್‌ಬೋರ್ಡ್ ಅಳವಡಿಸಲಾಗಿದೆ. ಉಳಿದ ಸ್ಥಳಗಳಲ್ಲೂ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಈ ರೀತಿಯ ಬೋರ್ಡ್ ಅಳವಡಿಸಲಾಗುವುದು. ಈ ರೀತಿ ದಂಡದ ಮೊತ್ತವನ್ನು ಬೋರ್ಡ್‌ನಲ್ಲಿ ಪ್ರದರ್ಶನ ಮಾಡುವುದರಿಂದ ವಾಹನ ಚಾಲಕರು ಎಚ್ಚೆತ್ತುಕೊಂಡು ದಂಡವನ್ನು ಬೇಗ ಪಾವತಿಸಲಿದ್ದಾರೆ. ಅಲ್ಲದೇ, ಸಂಚಾರ ನಿಯಮಗಳ ಬಗ್ಗೆಯೂ ಜಾಗೃತಿ ವಹಿಸಲಿದ್ದಾರೆ’ ಎಂದು ನಗರ ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.