
ಬೆಂಗಳೂರು: ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಂ ಕಾಲೇಜು (ಆರ್.ಸಿ) ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೂಡಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾ ಸಮಿತಿಯ ಸೆಕ್ರೆಟರಿಯಟ್ ಸದಸ್ಯ ನವಾಜ್ ಮಾತನಾಡಿ, ‘ಅತಿಥಿ ಉಪನ್ಯಾಸಕರ ನೇಮಕಾತಿ ಮಾಡದೆ, ಎರಡು ತಿಂಗಳು ತರಗತಿಗಳನ್ನು ನಡೆಸದೆ ಪರೀಕ್ಷೆ ಸಮಯದಲ್ಲಿ ಆರ್.ಸಿ ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಘಟಕ ಕಾಲೇಜುಗಳನ್ನಾಗಿ ಮಾಡಲಾಗುತ್ತಿದೆ. ಸರ್ಕಾರಿ ಕಾಲೇಜುಗಳೆಂದು ರೈತರು, ಕಾರ್ಮಿಕರ ಮಕ್ಕಳು ಬಹಳ ದೂರದಿಂದ ಬರುತ್ತಾರೆ. ಎಷ್ಟೊಂದು ಜನ ವಿದ್ಯಾರ್ಥಿಗಳು ಕಾಲೇಜಿನ ಶುಲ್ಕ ಭರ್ತಿ ಮಾಡಲು ಅರೆಕಾಲಿಕ ಕೆಲಸಗಳಿಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಘಟಕ ಕಾಲೇಜುಗಳಾಗಿ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ‘ಶಿಕ್ಷಣ ಸಚಿವರು ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಕೇವಲ 6 ತಿಂಗಳ ಹಿಂದೆ ಹೋರಾಟದ ಫಲವಾಗಿ, ಘಟಕ ಕಾಲೇಜುಗಳನ್ನಾಗಿ ಮಾಡಬೇಕೆನ್ನುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ, ಈಗ ಪರೀಕ್ಷೆಗಳನ್ನು ಘೋಷಿಸಿದ ನಂತರ ಮತ್ತೆ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ. ಮೈಸೂರಿನ ಯುವರಾಜ ಕಾಲೇಜನ್ನು ಮೈಸೂರು ವಿಶ್ವವಿದ್ಯಾಲಯದಡಿ ಘಟಕ ಕಾಲೇಜನ್ನಾಗಿ ಮಾಡಿದ ಮೇಲೆ, ಶುಲ್ಕವು ₹38 ಸಾವಿರವರೆಗೂ ಏರಿಕೆಯಾಗಿದೆ. ಮೈಸೂರಿನ ಬೇರೆ ಸರ್ಕಾರಿ ಕಾಲೇಜಿನಲ್ಲಿ ₹3,000 ಶುಲ್ಕ ಇದೆ. ಬಡ ವಿದ್ಯಾರ್ಥಿಗಳಿಂದ ದುಡ್ಡು ವಸೂಲಿ ಮಾಡುವ ಯೋಜನೆ ಇದಾಗಿದೆ’ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ರೋಹಿತ್, ಸದಸ್ಯರಾದ ತುಳಸಿ, ಪ್ರಕೃತಿ ಹಾಗೂ ರಕ್ಷು ಉಪಸ್ಥಿತರಿದ್ದರು.