
ಪ್ರಜಾವಾಣಿ ವಾರ್ತೆ
ಬೆಂಗಳೂರು: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿಯ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಮತ್ತು ಅಖಿಲ ಭಾರತ ಡೆಮಾಕ್ರೆಟಿಕ್ ವಿದ್ಯಾರ್ಥಿ ಸಂಘಟನೆಗಳು (ಎಐಡಿಎಸ್ಒ) ಖಂಡಿಸಿವೆ.
2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಶಾಸಕ ಕುಲದೀಪ್ ಸೆಂಗರ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ, ಈಗ ಹೈಕೋರ್ಟ್ ಜಾಮೀನು ನೀಡಿದೆ. ಈಗಾಗಲೇ ಕುಟುಂಬದವರನ್ನು ಕಳೆದುಕೊಂಡಿರುವ ಸಂತ್ರಸ್ತೆ ಮತ್ತು ಅವರ ತಾಯಿ ಇದರಿಂದ ಕಳವಳಗೊಂಡು, ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದರು. ಅವರನ್ನು ರಸ್ತೆಯಲ್ಲೇ ಅಮಾನವೀಯವಾಗಿ ಎಳೆದಾಡಲಾಯಿತು. ಇದು ಸಂತ್ರಸ್ತೆಯ ಜೀವನ ಅಸುರಕ್ಷಿತವಾಗಿರುವುದನ್ನು ತೋರಿಸುತ್ತಿದೆ ಎಂದು ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಎಸ್., ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಮತ್ತು ಸುರಕ್ಷತೆ ನಿರಾಕರಿಸುವುದು ಮತ್ತು ಆರೋಪಿಗಳು ಶಿಕ್ಷೆಯಿಂದ ಮುಕ್ತರಾಗಿ ಹೊರಬರುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗುತ್ತಿದೆ. ಪ್ರಭಾವಿಯಾದ ಅವರು ಸಾರ್ವಜನಿಕ ಜೀವನಕ್ಕೆ ಮರಳಿದಾಗ ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಗುತ್ತಿದೆ. ಸಂತ್ರಸ್ತರ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜಾಮೀನು ಪಡೆದ ವ್ಯಕ್ತಿ ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡುವುದನ್ನು, ಸಂತ್ರಸ್ತರನ್ನು ಬೆದರಿಸುವುದನ್ನು ಹತ್ತಿಕ್ಕಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.